Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರಗತಿಪರ ಮಠಾಧೀಶರು...

ಪ್ರಗತಿಪರ ಮಠಾಧೀಶರು...

ವಾರ್ತಾಭಾರತಿವಾರ್ತಾಭಾರತಿ2 July 2016 10:45 PM IST
share
ಪ್ರಗತಿಪರ ಮಠಾಧೀಶರು...

ಧರ್ಮಗಳಿರುವುದು ಮನುಷ್ಯನ ಉದ್ಧಾರಕ್ಕೇ ವಿನ: ಶೋಷಣೆಗಲ್ಲ. ಮಠಗಳಿರುವುದು ಮಾನವನ ಪ್ರಜ್ಞಾಪ್ರಭಾತಕ್ಕೆ, ಆಧ್ಯಾತ್ಮಿಕ ಉನ್ನತಿಗೆ ಮಾರ್ಗದರ್ಶನ ಮಾಡಲು, ಕೂಪಮಂಡೂಕತ್ವದಿಂದ ಮೇಲೆತ್ತಲು. ಆದರೆ ಇಂದು ಲೌಕಿಕದ ಹಲವುಹನ್ನೊಂದು ಬಗೆಯ ಶೋಷಣೆಗಳಿಗೆ ಈಡಾಗಿರುವ ಹುಲುಮಾನವರು ಧಾರ್ಮಿಕವಾಗಿಯೂ ಶೋಷಣೆಗೆ ತುತ್ತಾಗಿದ್ದಾರೆ. ಜಗತ್ತಿನ ಸಕಲ ಧರ್ಮಗಳ ಅನುಯಾಯಿಗಳೂ ಒಂದಲ್ಲ ಒಂದು ಬಗೆಯಲ್ಲಿ ದೇವರು, ಧರ್ಮಗಳ ಮಧ್ಯವರ್ತಿಗಳಾದ ಪುರೋಹಿತವರ್ಗದಿಂದ ಶೋಷಿತರು. ಎಲ್ಲ ಧರ್ಮಗಳೂ ಕ್ಷಮೆ, ದಯೆ, ಕರುಣೆ, ಸಹಿಷ್ಣುತೆ, ಸಮಾನತೆಗಳನ್ನು ಬೋಧಿಸುತ್ತವೆ. ಮಾನವ ಕುಲ ಒಂದೇ, ವಸುಧೈವ ಕುಟುಂಬಕಂ ಎನ್ನುವ ಆದರ್ಶವನ್ನು ಎಲ್ಲ ಧರ್ಮಗಳಲ್ಲೂ ಕಾಣುತ್ತೇವೆ. ಆದರೆ ಧರ್ಮ ಮತ್ತು ಸಾಮಾನ್ಯ ಮನುಷ್ಯರ ನಡುವಣ ಸ್ವಯಂಘೋಷಿತ ರಾಯಭಾರಿಗಳಾದ ಮಧ್ಯವರ್ತಿ ಮಠಗಳು, ಪುರೋಹಿತರು ಮೇಲು-ಕೀಳು ಶ್ರೇಣಿಯನ್ನು ಸೃಷ್ಟಿಸಿ ನಾನಾರೀತಿ ಸ್ತ್ರೀಪುರುಷರಾದಿಯಾಗಿ ಎಲ್ಲರನ್ನೂ ದೇವರು ಮತ್ತು ಧರ್ಮಗಳ ಹೆದರಿಕೆಯಲ್ಲಿ ಸಾವಿರಾರು ವರ್ಷಗಳಿಂದ ಶೋಷಿಸುತ್ತಿದ್ದಾರೆ. ಮಾನವ ವಿಕಾಸ ಚಂದ್ರಲೋಕದವರೆಗಿನ ವೈಜ್ಞಾನಿಕ ಸಾಧನೆ, ಸಂಶೋಧನೆಗಳನ್ನು ಕಂಡನಂತರವೂ ಶೋಷಣೆ ಮತ್ತು ಮೂಢನಂಬಿಕೆಗಳು ಅವ್ಯಾಹತವಾಗಿ ಸಾಗಿವೆ. ದೇವರು, ಧರ್ಮಗಳ ಹೆಸರಿನಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ, ಮಾನವರನ್ನು ಮಧ್ಯಯುಗೀನ ವ್ಯವಸ್ಥೆಗೆ ಕೊಂಡೊಯ್ಯುವಂಥ ಬಲಪಂಥೀಯ ವಿದ್ಯಮಾನಗಳನ್ನು ಗಮನಿಸಿದಾಗ ಈ ಶೋಷಣೆಗೆ ಕೊನೆಯೇ ಇಲ್ಲವೇ ಎನಿಸುತ್ತದೆ. ಇಂಥ ಪರಿಸ್ಥಿತಿಯಲ್ಲೂ ಗಾಢಾಂಧಕಾರ ದಲ್ಲೊಂದು ಆಶಾಕಿರಣದಂತೆ ಗೋಚರಿಸಿತು ಇತ್ತೀಚೆಗೆ ಮಹಾನಗರ ಬೆಂಗಳೂರಲ್ಲಿ ನಡೆದ ಒಂದು ಸಮಾವೇಶ. ಅದು ನಿಡುಮಾಮಿಡಿ ಮಠದ ಮಾನವ ಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮಿಗಳು ವ್ಯವಸ್ಥೆಗೊಳಿಸಿದ್ದ ಪ್ರಗತಿಪರ ಮಠಾಧೀಶರ ವೇದಿಕೆಯ ಸಮಾವೇಶ. ಎರಡು ದಿನಗಳು (ಜೂನ್21-22) ನಡೆದ ಈ ‘ಅಂತರ್ನಿರೀಕ್ಷಣೆಯ ಹಾದಿಯಲ್ಲಿ ಮಠಾಧೀಶರು’ ಸಮಾವೇಶದ ಗುರಿ ಉದ್ದೇಶಗಳು ಅದರ ಘೋಷಿತ ಶೀರ್ಷಿಕೆಯಿಂದಲೇ ಸ್ಪಷ್ಟ. ಇಂದು ದೇಶದ ಪರಿಸ್ಥಿತಿಯೇ ಹಾಗಿದೆ. ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿರುವ ಜನಸಾಮಾನ್ಯರು ಹಾಗೂ ಮಠಾಧೀಶರು ಇಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದಂತಹ ಸ್ಥಿತಿ. ಅರಿಷಡ್ವರ್ಗಗಳು ಇಬ್ಬರಿಗೂ ಅಮರಿಕೊಂಡಿದ್ದು ಭೋಗವೇ ಪ್ರಧಾನವಾಗಿ, ಶೀಲಕ್ಕೆ ಕಿಮ್ಮತ್ತಿಲ್ಲದಂಥ ಪರಿಸ್ಥಿತಿ. ಇಂಥ ಸ್ಥಿತಿ-ಸಂದರ್ಭದಲ್ಲಿ ಆತ್ಮನಿರೀಕ್ಷೆ ಮಾಡಿಕೊಳ್ಳುವಂಥ ವಿವೇಕ ಪ್ರಗತಿಪರ ಮಠಾಧೀಶರಲ್ಲಿ ಕಂಡುಬಂದಿರುವುದು ಶ್ಲಾಘನೀಯವೇ ಸರಿ. ಇಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಚರ್ಚಿತವಾದ ವಿಷಯಗಳು ಎಷ್ಟು ಸುಸಂಗತವೋ ಹಾಗೆಯೇ ಆ ಚಿಂತನಮಂಥನಗಳಿಂದ ಮೂಡಿ ಬಂದಿರುವ ನವನೀತವೂ ಅಷ್ಟೇ ಸಂಗತವಾದುದು. ಅನ್ಯಧರ್ಮ ಸಹಿಷ್ಣುತೆ ಮತ್ತು ಸಹಬಾಳ್ವೆಯ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಕಂಡುಬರುತ್ತಿರುವ ಈಗಿನ ಕಾಲಮಾನದಲ್ಲಿ ಪ್ರಗತಿಪರ ಮಠಾಧೀಶರು ಕೆಲವರು ಮಂಡಿಸಿರುವ ವಿಚಾರವಿವೇಕಗಳು ನಿಜಕ್ಕೂ ಚಿಂತನಾರ್ಹವಾದುವು.
‘ಮಠಾಧೀಶರು ಮತ್ತು ಕೋಮುವಾದ’ ಕುರಿತು ಮಾತನಾಡಿರುವ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಯವರು ನಿಡುಮಾಮಿಡಿ ಮಠದ ಪೀಠಾಧೀಶರಾದ ತರುವಾಯದಲ್ಲೇ ದಡ್ಡುಬಿದ್ದ ಸಮಾಜದಲ್ಲಿ ಜಾಗೃತಿಯುಂಟುಮಾಡಲು, ಸುಧಾರಣೆ ತರಲು ಹನ್ನೆರಡನೆ ಶತಮಾನದ ಬಸವ ಕ್ರಾಂತಿಯಂಥ ಸಾಮಾಜಿಕ ಕ್ರಾಂತಿಯ ಅಗತ್ಯವನ್ನು ಮನಗಂಡವರು. ಇಂಥದೊಂದು ಅಹಿಂಸಾತ್ಮ ಸಾಮಾಜಿಕ ಪರಿವರ್ತನೆಯ ಧ್ಯೇಯದಿಂದ ಅವರು ಸ್ಥಾಪಿಸಿದ ಮಾನವ ಧರ್ಮ ಪೀಠಕ್ಕೆ ಈಗ ಬೆಳ್ಳಿ ಹಬ್ಬದ ಹುರುಪು. ಮಾನವನ ಘನತೆಯ ಪಾರಮ್ಯ ಗೌರವಿಸುವ, ಸಮಾನತೆಗಳಿಂದ ಕೂಡಿದ ಸಮಾಜ ಕಟ್ಟುವ ದಿಶೆಯಲ್ಲಿ ಮಾನವ ಧರ್ಮ ಪೀಠ ಕಳೆದ ಇಪ್ಪತ್ತೈದು ವರ್ಷಗಳಿಂದ ಮಾಡಿ ಕೊಂಡು ಬಂದಿರುವ ಮಾನವ ಧರ್ಮ ಸ್ಥಾಪನೆಯ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಅತ್ಯಂತ ಮುಖ್ಯವಾದ ಹೆಜ್ಜೆ ಈ ಆತ್ಮ ನಿರೀಕ್ಷಣೆ.
ಕರಾಳವಾದ ಕೋಮುವಾದವನ್ನು ಕೊನೆಗೊಳಿಸುವುದು ಹೇಗೆ? ಇದರಲ್ಲಿ ಮಾಠಾಧೀಶರ ಪಾತ್ರವೇನು? ಅವರ ನೀತಿನಿಲುವುಗಳೇನು? ಅನ್ಯಧರ್ಮ ಸಹಿಷ್ಣುತೆ, ಅನ್ಯಧರ್ಮಗಳಲ್ಲಿರುವ ಮಾನವೋನ್ನತ ಮೌಲ್ಯಗಳನ್ನು ಬದುಕಿನ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳುವುದು ಮತ್ತು ಭೋಗಾಭಿಲಾಷೆಗಳನ್ನು ತ್ಯಜಿಸುವುದು -ಇವು ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ತೋರಿರುವ ಮಾರ್ಗ. ಸ್ವಲ್ಪವಿಶದೀಕರಿಸಿ ಹೇಳುವುದಾದರೆ, ಚನ್ನಮಲ್ಲ ಸ್ವಾಮಿಗಳ ಪ್ರಕಾರ, ನೆಮ್ಮದಿಯ ಬದುಕಿಗೆ, ಶಾಂತಿ ಸಹಬಾಳ್ವೆಗೆ ನಾವು ಜಗತ್ತಿನ ನಾಲ್ಕು ಧರ್ಮಗಳ ಕೆಲವೊಂದು ಮೌಲ್ಯಗಳನ್ನು ಜೀವನದ ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳಬೇಕು. ‘‘ಕ್ರೈಸ್ತ ಧರ್ಮ ಪ್ರೀತಿ ಕರುಣೆಗಳನ್ನು ಸಾರುವುದರಿಂದ’’ ಬಾಲ್ಯದಲ್ಲಿ ಮಕ್ಕಳಿಗೆ ಈ ಮೌಲ್ಯಗಳನ್ನು ಬೋಧಿಸಬೇಕು. ಯೌವ್ವನದಲ್ಲಿ, ‘‘ಕಾಯಕ ಶಕ್ತಿಯನ್ನು ಉತ್ತೇಜಿಸುವ ಬಸವಣ್ಣ, ಮುಹಮ್ಮದ್ ಪೈಗಂಬರ್ ಚಿಂತನೆಗಳನ್ನು’’ ಅಳವಡಿಸಿಕೊಳ್ಳುವಂತೆ ಬೋಧಿಸಬೇಕು. ಮಧ್ಯವಯಸ್ಸಿನಲ್ಲಿ ‘‘ವೇದಾಂತ ಅಥವಾ ಹಿಂದೂ ಮೌಲ್ಯಗಳನ್ನೂ’’, ವೃದ್ಧಾಪ್ಯದಲ್ಲಿ, ‘‘ಬುದ್ಧನ ಮೌಲ್ಯ’’ಗಳನ್ನು ಅಳವಡಿಸಿಕೊಳ್ಳಬೇಕು.
ಶಾಂತಿ, ಸಹಬಾಳ್ವೆಗೆ ಈ ಮೌಲ್ಯಗಳು ಸಹಕಾರಿ ಎನ್ನುವುದು ಔಚಿತ್ಯಪೂರ್ಣವಾದುದೇ. ಚನ್ನಮಲ್ಲ ಸ್ವಾಮಿಗಳು ಸೂಚಿಸಿರುವ ಮಾರ್ಗ ನಮ್ಮ ಆರ್ಷೇಯ ಚಿಂತನೆ ಮತ್ತು ವ್ಯವಸ್ಥೆಯನ್ನು ನೆನಪಿಗೆ ತರುತ್ತದೆ. ಹಿಂದೂ ಧರ್ಮ ಶಾಸ್ತ್ರಗಳು ಮನುಷ್ಯನ ಜೀವಿತಾವಧಿಯನ್ನು ನಾಲ್ಕು ಆಶ್ರಮಗಳನ್ನಾಗಿ ವಿಂಗಡಿಸಿದೆ. ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಿ ಇವೇ ಆ ನಾಲ್ಕು ಆಶ್ರಮಗಳು. ಮನುಷ್ಯನ ಆಧ್ಯಾತ್ಮಿಕ ಸಂಪತ್ತಿಗೆ ಅನುಕೂಲಿಸುವ ಜೀವನ ಹಂತಗಳಿಗೆ ಆಶ್ರಮಗಳೆಂದು ಹೆಸರುಕೊಡಲಾಗಿದೆ. ಆಶ್ರಮ ಧರ್ಮವೆಂದರೆ ಆಯಾ ಆಶ್ರಮದವರು ಅವಶ್ಯವಾಗಿ ಪರಿಪಾಲಿಸಬೇಕಾದ ನಿಯಮಗಳು. ಇಪ್ಪತ್ತೈದನೆಯ ವಯಸ್ಸಿನವರೆಗೆ ಬ್ರಹ್ಮಚಾರಿ, ಇದು ಅಧ್ಯಯನದ, ಇಂದ್ರಿಯ ನಿಗ್ರಹದ ಕಾಲ. ಗೃಹಸ್ಥದಲ್ಲಿ ಸಾಂಸಾರಿಕ ಜೀವನ. ವಾನಪ್ರಸ್ಥದಲ್ಲಿ, ಬ್ರಹ್ಮಚರ್ಯೆ, ಗೃಹಸ್ಥಗಳನ್ನು ಮುಗಿಸಿ ತಪಸ್ಸು, ಪೂಜಾದಿ ಕಾರ್ಯಗಳಲ್ಲಿ ನಿರತರಾಗಬೇಕು. ಸಂನ್ಯಾಸಾಶ್ರಮ ಐಹಿಕ ಸುಖ, ಭೋಗಭಾಗ್ಯಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ವೈರಾಗ್ಯ ಸ್ಥಿತಿ, ಮೋಕ್ಷಕ್ಕೆ ಹಂಬಲಿಸುವ ಹಂತ. ಮನುಜರು ಕಲಿತು ಪ್ರಬುದ್ಧರಾಗಿ, ಸಂಸಾರ, ಕಾಯಕ, ತಪಸ್ಸು, ಸಂನ್ಯಾಸಗಳ ಅವಸ್ಥಾಂತರಗಳಲ್ಲಿ ಮುಕ್ತಿಗೆ ಮಾಗಬೇಕಾದ ಪರಿಯನ್ನು ಈ ಆಶ್ರಮ ಧರ್ಮ ಧ್ವನಿಸುತ್ತದೆ. ಅನ್ಯಧರ್ಮಗಳ ಕರುಣೆ, ವಾತ್ಸಲ್ಯ, ಕಾಯಕ ಮೊದಲಾದ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಹಾಗೂ ಭೋಗ-ಭಯಗಳನ್ನು ಮೀರುವುದು ಮೊದಲಾದವೂ ಮಾನವನ ಮಾಗುವಿಕೆಯ ಪರಿಯನ್ನೇ ಹೇಳುತ್ತವೆ. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಗಳಲ್ಲಿದ್ದುಕೊಂಡೇ ಇದನ್ನು ಸಾಧಿಸಬಹುದು. ಆದರೆ ಜಾಗತೀಕರಣ ಮತ್ತು ಜಾತ್ಯತೀತ ಮಾನದಂಡಗಳಿಂದ ನೋಡಿದಲ್ಲಿ ವೀರಭದ್ರ ಚನ್ನಮಲ್ಲ ಸ್ವಾಮಿಗಳು ಸೂಚಿಸಿರುವಂತೆ, ಬದುಕಿನ ಕೆಲವೊಂದು ಹಂತಗಳಲ್ಲಿ ಅನ್ಯಧರ್ಮಗಳ ಮೌಲ್ಯಗಳನ್ನು ಅರಿತು, ಅಳವಡಿಸಿಕೊಳ್ಳಬೇಕಾದದ್ದು ಇಂದಿನ ಜರೂರು ಅಗತ್ಯ, ಅನಿವಾರ್ಯತೆ ಎಂಬುದು ದಿಟ. ಮಾನವರು ತಮ್ಮ ತಮ್ಮ ಧರ್ಮಗಳ ಕಣ್ಣುಪಟ್ಟಿ ಕಟ್ಟಿಕೊಂಡು ಕೂಪಮಂಡೂಕರಾಗಿ ಬದುಕುವುದು ಇಂದಿನ ಮರ್ತ್ಯಮಯ ವ್ಯಾವಹಾರಿಕ ಬದುಕಿನಲ್ಲಿ ಅಸಾಧ್ಯ. ಅನ್ಯಧರ್ಮಗಳ ಜೀವನ ಮೌಲ್ಯಗಳ ತಿಳಿವಳಿಕೆ ಪಡೆದು, ಅವುಗಳಲ್ಲಿ ಶ್ರೇಷ್ಠವೆನಿಸಿದ್ದನ್ನು ತಮ್ಮ ಆತ್ಮೋನ್ನತಿಗೆ ಅಳವಡಿಸಿಕೊಂಡಲ್ಲಿ ಅದು ವ್ಯವಹಾರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಉತ್ತಮ ನಡೆಯಾಗಬಹುದು ಎಂಬುದು ಚನ್ನಮಲ್ಲ ಸ್ವಾಮೀಜಿಯವರ ಸಂದೇಶದ ತಿರುಳಾಗಿದೆ. ಅನ್ಯಧರ್ಮಗಳೊಂದಿಗಿನ ಇಂಥದೊಂದು ಅನುಸಂಧಾನದಿಂದ ಹುಟ್ಟು-ಸಾವುಗಳ ನಡುವಣ ಬದುಕು ಅರ್ಥಪೂರ್ಣವಾಗುತ್ತದೆ, ಜನ್ಮದ ಗುರಿ ಸ್ಪಷ್ಟವಾಗುತ್ತದೆ, ಸಹಜೀವಿಗಳೊಂದಿಗೆ ಸಹನೆ, ಸಹಬಾಳ್ವೆ, ಕ್ಷಮೆ, ದಯೆ, ಕರುಣೆಗಳು ಸಾಧ್ಯವಾಗುತ್ತದೆ. ಇಂಥ ಒಂದು ಅರಿವಿನ ಸ್ಫೋಟ, ಬಹು ಸಂಸ್ಕೃತಿಗಳು ಅರ್ಥ ಪೂರ್ಣವಾಗಿ ಬೆಸೆದುಕೊಂಡ ವಿಶ್ವಸಂಸ್ಕೃತಿ ಯೊಂದಕ್ಕೆ, ಸಹಿಷ್ಣುವಿಶ್ವದ ಹೊಸ ನಾಗರಿಕತೆಗೆ ದಾರಿಯಾಗಬಲ್ಲದು. ಎಂದೇ ಇದು ಸ್ವಾಗತಾರ್ಹ.
   ಮಠಗಳು ಧರ್ಮ/ಜಾತಿ ರಾಜಕಾರಣಗಳ ಮೂಲ ನೆಲೆಯಾಗಿವೆ, ಮಠಗಳು ವಿದ್ಯಾ ವ್ಯಾಪಾರ ಕೇಂದ್ರಗಳಾಗಿವೆ, ಮಠಾಧಿಪತಿಗಳು ಲೌಕಿಕ ಭೋಗ ಮೆರೆತಗಳಲ್ಲಿ ಆಸಕ್ತರು ಇತ್ಯಾದಿ ಮಾತುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇವು ಉಪೇಕ್ಷಿಸಬಹುದಾದಂಥ ಉಡಾಫೆಯ ಮಾತುಗಳಲ್ಲ. ಈ ಮಾತುಗಳಲ್ಲಿ ಹುರುಳಿಲ್ಲದೆ ಇಲ್ಲ. ಪ್ರಗತಿಪರ ಮಠಾಧೀಶರು ಸಮಾವೇಶದಲ್ಲಿ ಈ ಬಗ್ಗೆ ಚರ್ಚಿಸುವ ಮೂಲಕ ಆತ್ಮಶೋಧ ಮಾಡಿಕೊಳ್ಳಲು ಪ್ರಯತ್ನಿಸಿರುವುದು ಯೋಗ್ಯವಾದುದೇ ಆಗಿದೆ. ‘‘ಸ್ವಾಮೀಜಿಗಳು ದುರಾಸೆಗೊಳಗಾಗಿ.....ಹೆಚ್ಚುಹೆಚ್ಚು ದುಡ್ಡು ಸಂಪಾದನೆ ಮಾಡುವ ಹಪಾಹಪಿಯಿಂದ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಶುರುಮಾಡಿದರು....ಬಹುತೇಕ ಮಠಗಳು ಸುಲಿಗೆ ಕೇಂದ್ರಗಳು ಇದೇ ಕಾರಣವಾಯಿತು....ಮಠಗಳು, ಮಠಾಧೀಶರು ಹುಟ್ಟುವುದು ಉತ್ಸವ ಮಾಡಿಸಿಕೊಳ್ಳಲು, ಕಿರೀಟತೊಟ್ಟು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿಕೊಳ್ಳುವುದಕ್ಕಲ್ಲ. ಸಮಾಜ ಸೇವೆ, ಅಸಹಾಯಕರಿಗೆ ಸಹಾಯ ಮಾಡಲು ಮಠಗಳು ಹುಟ್ಟಿವೆ. ಭೋಗದ ಸಂಕೇತಗಳಾದ ಕಿರೀಟ, ಸಿಂಹಾಸನ, ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುತ್ತಿದ್ದಾರೆ’’ ಎಂದು ಸಮ್ಮೇಳನದಲ್ಲಿ ವಿಷಾದ ವ್ಯಕ್ತಪಡಿಸಿರುವ ವೀರಭದ್ರ ಚನ್ನಮಲ್ಲ ಸ್ವಾಮಿಗಳು ಸತ್ಯವನ್ನೇ ನುಡಿದಿದ್ದಾರೆ. ಅವರ ಮಾತುಗಳು ಇಂಥ ಆಸಕ್ತಿ, ಪ್ರವೃತ್ತಿಗಳುಳ್ಳ ಮಠಾಧೀಶರ ಅಂತಃಚಕ್ಷುಗಳನ್ನು ತೆರೆಸಬೇಕು.
ಮಠಾಧೀಶರಲ್ಲಿ ಕೆಲವರು ಬ್ರಹ್ಮಚರ್ಯೆ ಪಾಲನೆಯಲ್ಲಿ ಸೋಲುತ್ತಿರುವುದಕ್ಕೆ, ಜೀವಿತದ ಕೊನೆಯಲ್ಲಿ ಬರಬೇಕಾದ ಸಂನ್ಯಾಸಾಶ್ರಮವನ್ನು ಹಲವು ಲೋಭ, ಆಮಿಷಗಳಿಂದಾಗಿ ಬಾಲ್ಯದಲ್ಲೇ ಅಮಾಯಕರ ಮೇಲೆ ಹೇರಲ್ಪಡುತ್ತಿರುವುದೆ ಕಾರಣವೆಂದು ವಿಶ್ಲೇಷಿಸಿರುವ ಚನ್ನಮಲ್ಲ ಸ್ವಾಮಿಗಳು, ಬಾಲಸಂನ್ಯಾಸಕ್ಕೆ ಕಟುವಾದ ವಿರೋಧ ವ್ಯಕ್ತಪಡಿಸಿ, ಒಟ್ಟಾರೆಯಾಗಿ ‘‘ಈ ಸಂನ್ಯಾಸ ಜೀವನದ ಬಗ್ಗೆ ಎಲ್ಲ ಮಠಾಧೀಶರೂ ಮರುಚಿಂತನೆ ನಡೆಸಬೇಕಾದ ಕಾಲಬಂದಿದೆ’’ ಎಂದು ಹೇಳಿರುವುದು ಮಠಗಳ ಪಾವಿತ್ರ್ಯವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಯಾಗಿದೆ. ಈ ವಿಷಯ ದಲ್ಲಿ ಮಠಾಧೀಶರು ಮತ್ತು ಮಠಗಳ ಶಿಷ್ಯ ವರ್ಗದಲ್ಲಿ ವ್ಯಾಪಕವಾದ ಚರ್ಚೆ ಅಪೇಕ್ಷಣೀಯ.ಚರ್ಚೆ, ಸಮಾಲೋಚನೆಗಳಿಂದ ಬಾಲಸಂನ್ಯಾಸ ಮತ್ತಿತರ ಅನಿಷ್ಟ ಪದ್ಧತಿಗಳಿಗೆ ಇತಿಶ್ರೀ ಹೇಳಲು ಕಾರ್ಯೋನ್ಮುಖವಾಗುವುದಕ್ಕೆ ಅಗತ್ಯವಾದ ಒಮ್ಮತದ ಶಕ್ತಿಯನ್ನು ತುಂಬಲು ಸಹಾಯವಾದೀತು.
   ಮನುಸ್ಮತಿಯಲ್ಲ, ರಾಷ್ಟ್ರದ ಸಂವಿಧಾನವೇ ಧರ್ಮಗ್ರಂಥ, ಯಾವ ಧರ್ಮ ಗ್ರಂಥವೂ ಸಂವಿಧಾನಕ್ಕೆ ಸ್ಪರ್ಧಿ ಯಾಗಲಾರವು ಎನ್ನುವ ಮಾತುಗಳನ್ನು ಇಂದಿನ ಪರಿಸ್ಥಿತಿಯಲ್ಲಿ ಜನತೆಯ ಹಾದಿ ತಪ್ಪಿಸುತ್ತಿರುವ ರಾಜಕೀಯ ಹಾಗೂ ಸಂಘಸಂಸ್ಥೆಗಳ ನಾಯಕರು ಹಾಗೂ ಕಣ್ಣುಪಟ್ಟಿ ಕಟ್ಟಿಕೊಂಡು ಅವರನ್ನು ಹಿಂಬಾಲಿಸುತ್ತಿರುವ ಪ್ರಜೆಗಳೂ ಮನನ ಮಾಡಬೇಕು.
ಈ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಮತ್ತಿತರ ಭಾಗಗಳ ಬಹುತೇಕ ವೀರಶೈವ ಮಠಗಳ ಸ್ವಾಮಿ ಗಳು ಭಾಗವಹಿಸಿ ಆತ್ಮಾವಲೋಕನದ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಮೂಢನಂಬಿಕೆಗಳು ಮತ್ತು ಕಂದಾಚಾರಗಳನ್ನು ತೊರೆದು ಭಕ್ತಗಣವನ್ನು ಪ್ರಗತಿಯ ದಿಕ್ಕಿನಲ್ಲಿ ಕೈಹಿಡಿದು ನಡೆಸಲು ಸಹಕಾರಿ ಯಾದೀತು ಎಂದು ಆಶಿಸಬಹುದು. ‘‘ಸ್ತ್ರೀಯರು ಗಂಡ ಸತ್ತ ಬಳಿಕ ಬಳೆ, ಮಾಂಗಲ್ಯ ಧರಿಸಬಾರದು ಇತ್ಯಾದಿ ಹಲವಾರು ಮೂಢನಂಬಿಕೆಗಳನ್ನು, ಮಹಿಳೆಯರನ್ನು ಕಡೆಗಣಿಸುವ ಆಚರಣೆಗಳನ್ನು ಕೊನೆಗಾಣಿಸುವ ಹೊಣೆ ಮಠಾಧೀಶರ ಮೇಲಿದೆ’’ ಎಂದು ಚನ್ನಮಲ್ಲ ಸ್ವಾಮಿಗಳು ಹೇಳಿರುವ ಕಿವಿಮಾತು ನಮ್ಮ ಮಠಾಧೀಶರ ಹಾಗೂ ಸರಕಾರದ ಕಣ್ತೆರೆಸಬೇಕು. ಸರಕಾರ ಇನ್ನಾದರೂ ಮೂಢನಂಬಿಕೆಗಳನ್ನು ನಿಷೇಧಿಸುವ ಶಾಸನ ಮಾಡಿದಲ್ಲಿ ಮೂಢನಂಬಿಕೆಗಳ ವಿರುದ್ಧ ಜನಮನ ತಿದ್ದುವ ಪ್ರಯತ್ನದಲ್ಲಿ ಮಠಾಧೀಶರ ಕೈಬಲಪಡಿಸಿದಂತಾಗುತ್ತದೆ. ಪ್ರಗತಿಪರ ಮಠಾಧೀಶರ ವೇದಿಕೆಗೆ ಉಳಿದ ಮಠಗಳೂ ಸಹಕಾರ ಹಸ್ತ ಚಾಚಿದಲ್ಲಿ, ಮೂಢನಂಬಿಕೆಗಳು, ಕಂದಾಚಾರಗಳನ್ನು ತೊಲಗಿಸಿ ಜನಜೀವನವನ್ನು ಆತ್ಮೋನ್ನತಿಯ ಧಾರ್ಮಿಕ ಸಂಸ್ಕಾರದ ಮಾರ್ಗದಲ್ಲಿ ನಡೆಸುವ ವೇದಿಕೆಯ ಆಶಯ ನಿಜವಾಗುವ ದಿನಗಳು ದೂರವಿರಲಾರವು.

ಭರತ ವಾಕ್ಯ:
ಮಾನವ ಜನ್ಮದ ಘನತೆಯನ್ನು ಗೌರವಿಸಿ ಅವರನ್ನು ಪ್ರೀತಿ ಸಮಾನತೆಗಳಿಂದ ಕಾಣುವುದೇ ಧರ್ಮದ ಮೂಲಗುಣ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X