ಪಿ.ಸಾಯಿನಾಥ್ ಎನ್ನುವ ಮಾಧ್ಯಮ

ಶು ಕ್ರವಾರ ವಿಧಾನ ಸೌಧದ ಬಾಂಕ್ವೆಟ್ ಹಾಲ್ ಕಡೆಗೆ ಬೆಂಗಳೂರಿನ ಸುಮಾರು ರಸ್ತೆಗಳು ಪ್ರಯಾಣ ಬೆಳೆಸಿದ್ದವು. 2014 ಹಾಗೂ 2015ನೇ ಸಾಲಿನ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿ.ಸಾಯಿನಾಥ್ ಎನ್ನುವ ಮಾಧ್ಯಮ ಲೋಕದ ಮಾಧ್ಯಮವನ್ನು ನೋಡುವ, ಅವರ ಮಾತುಗಳನ್ನು ಕೇಳುವ ಅವಕಾಶ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಮಾಧ್ಯಮ ಜಗತ್ತಿಗೆ ಸೇರಿದವರಷ್ಟೇ ಅಲ್ಲ, ಜಗತ್ತನ್ನು ನೋಡಲು ಹೊಸ ನೋಟ ಬೇಕು ಎಂದು ಆಶಿಸುವ ಎಲ್ಲಾ ಸಮಾನಮನಸ್ಕರೂ ಅಲ್ಲಿ ಸೇರಿದ್ದರು.
ಪಿ.ಸಾಯಿನಾಥ್ ಎಲ್ಲರೂ ಬರೆಯುವ ಭಾರತದ ಬಗ್ಗೆ ಬರೆದವರಲ್ಲ. ವರ್ಷಗಟ್ಟಲೆ ನಗರವನ್ನು ಮರೆತು, ಪಟ್ಟಣಗಳನ್ನು ತೊರೆದು ಹಳ್ಳಿಗಾಡಿನಲ್ಲಿ, ಗುಡ್ಡಗಾಡಿನಲ್ಲಿ ಬದುಕುಗಳನ್ನು ಹುಡುಕಿಕೊಂಡು ಅಲೆದವರು. ಹಾಗೆ ಹೊರಟ ಸಾಯಿನಾಥ್ ಒಂದು ಕೈಯಲ್ಲಿ ಕ್ಯಾಮರಾ ಮತ್ತೊಂದು ಕೈಯಲ್ಲಿ ಲೇಖನಿ ಹಿಡಿದುಕೊಂಡು ನಮ್ಮೆಲ್ಲರಿಗೂ ತೋರಿಸಿದ ಭಾರತ ದರ್ಶನ ನಾವೆಂದೂ ಮರೆಯಲಾಗದ್ದು.
ಅಲ್ಲಿ ಪೇಜ್ 3ರ ರಂಗುರಂಗಿನ ಲೋಕವಿರಲಿಲ್ಲ, ಪೇಜ್ ಒಂದರ ರಾಜಕೀಯವಿರಲಿಲ್ಲ, ಪೇಜ್ ಎರಡರ ಕ್ರೈಮ್ ಇರಲಿಲ್ಲ, ಕಡೆಯ ಪುಟದಲ್ಲಿನ ಆಟವೆಂಬ ಬೃಹತ್ ಉದ್ಯಮವೂ ಇರಲಿಲ್ಲ. ಅಲ್ಲಿದ್ದದ್ದೆಲ್ಲಾ ಯಾವುದೇ ಪತ್ರಿಕೆಗಳಿಗೆ ಸುದ್ದಿಯಾಗದವರ ಸುದ್ದಿಗಳು, ಅವರು ಹೆಸರಿಲ್ಲದ ಮನುಷ್ಯರು, ಓಟು ಕಾರ್ಡಿನಲ್ಲಿ ಮಾತ್ರ ಬದುಕುವ ವ್ಯಕ್ತಿಗಳು. ಅಂತಹ ಭಾರತದ ಬಗ್ಗೆ ಬರೆದ ಪಿ.ಸಾಯಿನಾಥ್ ನಿನ್ನೆ ಮಾತನಾಡಿದ್ದು ಮಾಧ್ಯಮದ ಬಗ್ಗೆ, ಮಾಧ್ಯಮದ ಆಯ್ದ ಸತ್ಯಗಳ ಬಗ್ಗೆ, ಆಯ್ದ ಸುದ್ದಿಗಳ ಬಗ್ಗೆ.
ಪತ್ರಿಕಾಧರ್ಮ ಯಾವಾಗ ಪತ್ರಿಕೋದ್ಯಮವಾಯಿತೋ ಆಗ ಅದು ರಾಜಕೀಯ ಮತ್ತು ಇನ್ನಿತರ, ಲಾಭಗಳ ಸರಪಳಿಗಳಿಂದ ಬಂಧಿತವಾಯಿತು ಎನ್ನುವ ಮಾತನ್ನು ಅವರು ಹಲವಾರು ಉದಾಹರಣೆಗಳ ಮೂಲಕ, ಅಂಕಿ ಅಂಶಗಳ ಮೂಲಕ ಕೊಡುತ್ತಾ ಹೋದರು.
We cover only if you bring us revenue ಎನ್ನುವ ಸತ್ಯ ಇಂದು ಎಲ್ಲಾ ಮಾಧ್ಯಮಗಳನ್ನೂ ಆಳುತ್ತಿದೆ. ಹಣ ತಾರದ ಸುದ್ದಿ ಮಾಧ್ಯಮಗಳಿಗಿಂದು ಸುದ್ದಿಯಾಗಿ ಉಳಿದಿಲ್ಲ. ಭಾರತದ ಮುಕ್ಕಾಲುಪಾಲು ಜನ ವಾಸ ಮಾಡುತ್ತಿರುವ ಹಳ್ಳಿಗಳ ಸುದ್ದಿ ಇಂದು ನಮಗೆ ಮಾಧ್ಯಮದಲ್ಲಿ ಕಾಣುತ್ತಿಲ್ಲ. ಅಷ್ಟೇಕೆ ಪಟ್ಟಣಗಳ ಸುದ್ದಿಗೂ ಅಲ್ಲಿ ಜಾಗವಿಲ್ಲ.
ಅಲ್ಲಿ ಇಂದು ಸ್ಥಳ ಸಿಗುತ್ತಿರುವುದು ದಿಲ್ಲಿಯ ಸುದ್ದಿಗೆ, ಬಾಲಿವುಡ್ ಸುದ್ದಿಗೆ, ಕ್ರಿಕೆಟ್‌ನ ಸುದ್ದಿಗೆ. ಭಾರತದ ಪತ್ರಿಕೆಗಳಲ್ಲಿ ಇಂದು ಕೃಷಿಗೇ ಮೀಸಲಾದ ಪತ್ರಕರ್ತ ಕಾಣುವುದಿಲ್ಲ, ಕಾರ್ಮಿಕರಿಗೇ ಮೀಸಲಾದ ಪತ್ರಕರ್ತ ಸಿಗುವುದಿಲ್ಲ. ಇಲ್ಲಿ ಬಹುತೇಕ ಪತ್ರಕರ್ತರು ಸ್ಟೆನೋಗ್ರಾಫರ್‌ಗಳಾಗಿ ಕೇವಲ ಹೇಳಿದ್ದನ್ನು ಬರೆದುಕೊಳ್ಳುವ ಲೇಖನಿಗಳಾಗಿ ಬದಲಾಗಿದ್ದಾರೆ ಎನ್ನುವುದರಲ್ಲಿ ನಮ್ಮ ದುರಂತ ಇದೆ.
ಒಂದು ಮಹಾ ನೀರಿನ ಸಮಸ್ಯೆ ನಮ್ಮೆದುರಲ್ಲಿ ತಾಂಡವವಾಡುತ್ತಿದೆ, ನಾವು ಅದನ್ನು ನೋಡುವ ಕಣ್ಣುಗಳಿಗೆ ಕಪ್ಪು ಕನ್ನಡಕ ಹಾಕಿ ಕುಳಿತಿದ್ದೇವೆ. ನೀರಿನ ಮೂಲಗಳು ಒಣಗುತ್ತಿವೆ, ನದಿಗಳು ಸೊರಗುತ್ತಿವೆ. ಕೃಷಿಯಿಂದ ಕಿತ್ತು ಕೈಗಾರಿಕೆಗಳಿಗೆ ನೀರು ಕೊಡುತ್ತಿದ್ದೇವೆ, ಹಳ್ಳಿಗಳಿಂದ ಕಿತ್ತು ನಾವು ಪಟ್ಟಣಗಳಿಗೆ ನೀರು ಕೊಡುತ್ತಿದ್ದೇವೆ, ಜೀವನೋಪಾಯದಿಂದ ಕಿತ್ತು ಜೀವನಶೈಲಿಯ ಐಷಾರಾಮಕ್ಕೆ ನೀರನ್ನು ಕೊಡುತ್ತಿದ್ದೇವೆ. ಹೀಗಿರುವಾಗ ಇನ್ನು ಮೂರು ಮಾನ್ಸೂನ್‌ಗಳು ಪೂರ್ಣವಾಗಿ ಸುರಿದರೂ ಭಾರತದ ನೀರಿನ ಸಮಸ್ಯೆ ತೀರುವುದಿಲ್ಲ. ಹೀಗೆ ಕೃಷ್ಣಾ ಮತ್ತು ಗೋದಾವರಿ ನದಿಗಳ ಮೂಲದಿಂದ ಅವರು ನದಿಯ ಹಾದಿಗುಂಟಾ ಅವರು ಮಾಡಿದ ಒಂದು ಪಯಣದ ಬಗ್ಗೆ ಪಿ.ಸಾಯಿನಾಥ್ ಹೇಳುತ್ತಾರೆ.
ಗೋದಾವರಿಯ ಮೂಲಸ್ಥಾನದಲ್ಲಿ ಇಂದು ನೀರಿಲ್ಲ. ಬ್ರಹ್ಮಗಿರಿ ಇಂದು ಒಣಗಿಹೋಗಿದೆ, ಏಕೆಂದು ಕಾರಣ ಹುಡುಕಿದರೆ ಅಲ್ಲಿನ ಒಂದೊಂದು ಇಂಚು ನೆಲವೂ ಇಂದು ಕಾಂಕ್ರಿಟ್‌ಮಯವಾಗಿದೆ, ಅಲ್ಲಿನ ಪರ್ವತದ ಮರಗಳೆಲ್ಲವನ್ನೂ ಕಡಿಯಲಾಗಿದೆ, ಅಲ್ಲೆಲ್ಲಾ ರೆಸಾರ್ಟ್ ಗಳು ತುಂಬಿತುಳುಕುತ್ತಿವೆ. ನಿಸರ್ಗಧಾಮವಾಗಿದ್ದ ಬ್ರಹ್ಮಗಿರಿ ಇಂದು ಹಾಲಿಡೇ ವಿಲೇಜ್ ಆಗಿದೆ. ಅದಕ್ಕಿಂತ ತಮಾಷೆ ಎಂದರೆ ಬ್ರಹ್ಮಗಿರಿಯಲ್ಲಿ, ತ್ರ್ಯಯಂಬಕೇಶ್ವರನ ಸನ್ನಿದಿಯಲ್ಲಿ ತೀರ್ಥಸ್ನಾನಕ್ಕೆ ಜನ ಬರುತ್ತಾರಲ್ಲಾ ಅವರಿಗೇನು ಮಾಡುವುದು? ಟ್ಯಾಂಕರ್ ಗಳಲ್ಲಿ ನೀರು ತರಿಸಿ ನದಿಯ ಒಡಲಿಗೆ ಸುರಿಯಲಾಗುತ್ತಿದೆ. ಇಡೀ ಪ್ರಪಂಚದಲ್ಲಿ ನದಿಗೆ ಟ್ಯಾಂಕರ್ ನೀರನ್ನು ತುಂಬಿಸುತ್ತಿರುವ ಒಂದೇ ದೇಶ ಭಾರತ!
ಎಲ್ಲೋ ಕುಂಭಮೇಳವಾಗುತ್ತದೆ. ಅಲ್ಲಿಗೆ ಬಸಿದುಕೊಂಡ ನೀರು ಸತಾರದ ಎಕರೆಗಟ್ಟಲೆ ದ್ರಾಕ್ಷಿ ತೋಟಗಳನ್ನು ಬರಡಾಗಿಸುತ್ತದೆ. ಬರದಿಂದ ತತ್ತರಿಸುತ್ತಿದ್ದ ಮರಾಠಾವಾಡದಿಂದ ಸತಾರಾದ ದ್ರಾಕ್ಷಿತೋಟಗಳಿಗೆ ಕೆಲಸಕ್ಕೆ ಬರುತ್ತಿದ್ದ ಅಷ್ಟೂ ಕೂಲಿಕಾರ್ಮಿಕರ ಮನೆಗಳಲ್ಲಿ ಒಲೆ ಉರಿಯುವುದಿಲ್ಲ. ಟ್ಯಾಂಕರ್ ನೀರಿಗಾಗಿ ಗಂಟೆಗಟ್ಟಲೆ ಕಾದ ಹೆಣ್ಣುಮಗಳು ಒಂದು ಲೀಟರ್ ನೀರಿಗೆ 45 ಪೈಸೆ ಕೊಡುತ್ತಾಳೆ, ಬಿಯರ್ ಫ್ಯಾಕ್ಟರಿಗಳಿಗೆ ಲೀಟರ್‌ಗೆ ನಾಲ್ಕುಪೈಸೆ ಲೆಕ್ಕದಲ್ಲಿ ನೀರು ಸರಬರಾಜಾಗುತ್ತದೆ. ಭಾರತದ ಎಚ್ಚೆತ್ತ ಜನರು ಹೇಗೆ ಇಲ್ಲಿನ ಅನುತ್ಪಾದಕ ವರ್ಗ ಉತ್ಪಾದಕ ವರ್ಗದ ತೆರಿಗೆ ಹಣವನ್ನು ಕೊಳ್ಳೆಹೊಡೆಯುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕಣ್ಣೀರಿಡುತ್ತಾರೆ.
Diyas on the Ganges, Evening Offerings The Hindu faith has many colorful, often flamboyant traditions, rituals, and ceremonies. Perhaps one of the more subdued traditions is that of setting offerings adrift on the sacred waters of the Ganges. These small votives comprised of cups made of dried leaves, marigold flower petals and a lit candle, are gently placed upon the river's surface at sundown.
ತಿಂಗಳಿಗೆ ಐದು ಸಾವಿರ, ಹತ್ತು ಸಾವಿರ ಕನಿಷ್ಠ ಸಂಪಾದನೆ ಇರುವ ಮನೆ ಒಡೆಯನ ಸಂಖ್ಯೆ ನಮಗೆ ಗಾಬರಿ ಹುಟ್ಟಿಸುತ್ತಿದೆ, ಆದರೆ ಒಂದು ಇಡೀ ಕೃಷಿ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ತಿಂಗಳಿಗೆ ಕೇವಲ 6,426. ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಮಾಲಕತ್ವ ಕಣ್ಣಿಗೆ ರಾಚುತ್ತಿದೆ. ಇಡೀ ಪ್ರಪಂಚದಲ್ಲಿನ ಜನರ ಜೀವನಮಟ್ಟದ ಪಟ್ಟಿ ತಯಾರಿಸಿದರೆ ಸೋಮಾಲಿಯಾದಿಂದ ಕೆಳಗಡೆ ಭಾರತದ ಸರಾಸರಿ ಜನರ ಜೀವನ ಮಟ್ಟ ಬರುತ್ತದೆ, ಆದರೆ ಭಾರತದ ಕೆಲವಾರು ಮಂದಿಯ ಹೆಸರು ಫೋರ್ಬ್ ಪಟ್ಟಿಯಲ್ಲಿ ರಾರಾಜಿಸುತ್ತದೆ.
ಹರ್ಯಾಣ ಮತ್ತು ರಾಜಸ್ಥಾನದ ಪಂಚಾಯತ್‌ಗಳಲ್ಲಿ ಕನಿಷ್ಠ ಇಷ್ಟು ವಿದ್ಯಾಭ್ಯಾಸ ಇರುವವರು ಮಾತ್ರ ಪಂಚಾಯತ್‌ಬೋರ್ಡ್ ಚುನಾವಣೆಗೆ, ಸರಪಂಚ್ ಚುನಾವಣೆಗೆ ನಿಲ್ಲಬಹುದು ಎನ್ನುವ ಒಂದು ಕಾನೂನು ಹೊರಡಿಸುತ್ತಾರೆ, ಅದು ಲಕ್ಷಾಂತರ ಮಂದಿ ದಲಿತರನ್ನೂ, ಬಡವರನ್ನೂ ಪ್ರಾಥಮಿಕ ಅಧಿಕಾರದಿಂದ ಒಂದೇ ಏಟಿಗೆ ದೂರ ಇಟ್ಟುಬಿಡುತ್ತದೆ. ಆದರೆ ಅದೇ ನಿಯಮವನ್ನು ಮಂತ್ರಿಗಳಾಗಲು, ಶಾಸಕರಾಗಲು, ಎಂಪಿ.ಗಳಾಗಲೂ ಅನ್ವಯಿಸುವುದಿಲ್ಲ.
ಪಿ.ಸಾಯಿನಾಥ್ ಅಂಕಿ ಅಂಶಗಳ ಸಹಾಯದಿಂದ ಎಲ್ಲವನ್ನೂ ವಿವರಿಸುತ್ತಾ ಹೋದರು. ’ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಮಾಧ್ಯಮ ಬಹಳ ಪ್ರಮುಖವಾದದ್ದು ನಿಜ, ಆದರೆ ಮಾಧ್ಯಮದಲ್ಲಿ ಪ್ರಜಾಪ್ರಭುತ್ವ ತರುವವರು ಯಾರು?’ ಈ ಪ್ರಶ್ನೆ ಕೇಳಿ ಸಾಯಿನಾಥ್ ಮಾತು ಮುಗಿಸಿದರು. ಆ ಪ್ರಶ್ನೆ ಅಲ್ಲಿದ್ದವರ ಮನಸ್ಸಿನಲ್ಲಿ ಇನ್ನಷ್ಟು, ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಇತ್ತು.





