ಬಾಂಗ್ಲಾ: ಹಿಂದೂ ಅರ್ಚಕನಿಗೆ ಇರಿತ

ಢಾಕಾ,ಜು.2: ನೈಋತ್ಯ ಬಾಂಗ್ಲಾದಲ್ಲಿ ಹಿಂದೂ ದೇವಾಲಯವೊಂದರ ನೌಕರನನ್ನು ಹತ್ಯೆಗೈದ ಶಂಕಿತ ಐಸಿಸ್ ಉಗ್ರರು,ಶನಿವಾರ ಇನ್ನೊಂದು ದೇವಾಲಯದ ಹಿಂದೂ ಅರ್ಚಕನನ್ನು ಮಾರಕಾಯುಧಗಳಿಂದ ಕಡಿದು ಗಂಭೀರಗಾಯಗೊಳಿಸಿದ ಘಟನೆ ಸತ್‌ಖೀರಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಸತ್‌ಖೀರಾ ಜಿಲ್ಲೆಯ ಶ್ರೀ ಶ್ರೀ ರಾಧಾಗೋಬಿಂದ್ ದೇವಾಲಯದ ಅರ್ಚಕ ಬಾಬಾಸಿಂಧು ರಾಯ್, ದೇಗುಲದ ಆವರಣದೊಳಗೆ ಮಲಗಿದ್ದಾಗ, ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಗೈದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
‘‘ ಹಂತಕರು, ರಾಯ್ ಅವರ ಎದೆ ಹಾಗೂ ಬೆನ್ನಿಗೆ ಇರಿದಿದ್ದಾರೆ. ಅವರ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ಢಾಕಾದ ಆಸ್ಪತ್ರೆಗೆ ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ’’ ಎಂದು ಸತ್‌ಖೀರಾ ಜಿಲ್ಲೆಯ ಉಪ ಪೊಲೀಸ್ ವರಿಷ್ಠ ಅತುಲ್ ಹಖ್ ತಿಳಿಸಿದ್ದಾರೆ.
ಶುಕ್ರವಾರದಂದು ಪಶ್ಚಿಮ ಬಾಂಗ್ಲಾದ ಜೆನಿಯಾಧಾ ಜಿಲ್ಲೆಯಲ್ಲಿ ದೇವಾಲಯವೊಂದರ ಅರ್ಚಕನನ್ನು ಕಡಿದು ಕೊಲೆ ಮಾಡಲಾಗಿತ್ತು.
Next Story





