ಡಿಸೆಂಬರ್ ವೇಳೆಗೆ ರೆತರಿಗೆ ಬಗರ್‌ಹುಕುಂ ಭೂಮಿ: ಸಚಿವ ಕಾಗೋಡು ತಿಮ್ಮಪ್ಪ

ಬೆಂಗಳೂರು, ಜು.2: ಕೇಂದ್ರ ಸರಕಾರದ ಅವೈಜ್ಞಾನಿಕ ಕಾನೂನಿನಿಂದಾಗಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಸಿಗುವುದಿಲ್ಲ. ಆದುದರಿಂದ, ರಾಜ್ಯ ಸರಕಾರ ಕಾನೂನು ಸರಳೀಕರಣಗೊಳಿಸಿ ಬಡವರಿಗೆ ಡಿಸೆಂಬರ್ ವೇಳೆಗೆ ಭೂಮಿ ನೀಡಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಕಾನೂನಿನ ಅನ್ವಯ ಪರಿಶಿಷ್ಟರು 5 ವರ್ಷ ಭೂಮಿ ಸಾಗುವಳಿ ಮಾಡುತ್ತಿದ್ದರೆ ಸಾಕು. ಇತರ ಸಮುದಾಯದವರು ಮೂರು ತಲೆಮಾರುಗಳಿಂದ ಉಳುಮೆ ಮಾಡುತ್ತಿರಬೇಕು. ಅಲ್ಲದೆ, ಮೂರು ತಲೆಮಾರಿನವರು ಸಾಕ್ಷಿ ಹೇಳಬೇಕು ಎಂದು ನಮೂದಿಸಿರುವುದರಿಂದ ಬಡವರಿಗೆ ಅನ್ಯಾಯವಾಗಲಿದೆ ಎಂದರು.
ಆದುದರಿಂದ, ರಾಜ್ಯ ಸರಕಾರವು ಓರ್ವ ಹಿರಿಯ ಸಾಕ್ಷಿ, ಮತದಾರರ ಗುರುತಿನ ಚೀಟಿ, ವಾಸದ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ದೃಢೀಕರಣ ಪತ್ರಗಳನ್ನು ಸಲ್ಲಿಸಿದರೆ ಸಾಕು ಎಂದು ತೀರ್ಮಾನಿಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಅರಣ್ಯ ಪ್ರದೇಶದಲ್ಲಿನ ಸಾಗುವಳಿಗೆ ಸಂಬಂಧಿಸಿ ದಂತೆ ರಾಜ್ಯದಲ್ಲಿ 4 ರಿಂದ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಹ ಫಲಾನುಭವಿಗಳಿಗೆ ಒಟ್ಟು 6ಲಕ್ಷ ಎಕರೆ ಭೂಮಿಯನ್ನು ಒದಗಿಸಬೇಕಾಗಿದೆ. ಈ ಹಿಂದೆ ತಿರಸ್ಕೃತವಾಗಿರುವ ಅರ್ಜಿಗಳು ಹಾಗೂ ಹೊಸದಾಗಿ ಅರ್ಜಿಗಳನ್ನು ಪಡೆದು ಪ್ರಸಕ್ತ ಸಾಲಿನ ಡಿಸೆಂಬರ್ ಒಳಗಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ರೈತರಿಗೆ ಭೂಮಿ ನೀಡುವುದು ಕಂದಾಯ ಇಲಾಖೆಯ ಕೆಲಸ. ಆದರೆ, ಪರಿಶಿಷ್ಟರಿಗೆ ಭೂಮಿ ಹಂಚಿಕೆ ಮಾಡುವ ಹೊಣೆ ಸಮಾಜ ಕಲ್ಯಾಣ ಇಲಾಖೆಯದ್ದು. ಬಗರ್‌ಹುಕುಂ ಸಾಗುವಳಿ ಜಮೀನನ್ನು ಬಡವರಿಗೆ ಹಂಚಿಕೆ ಮಾಡುವ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಆಸಕ್ತಿಯಿಲ್ಲ ಎಂದು ಕಾಗೋಡು ತಿಮ್ಮಪ್ಪ ಕಿಡಿಗಾರಿದರು.
ಕಂದಾಯ ಇಲಾಖೆಯಲ್ಲಿ 1500 ಸರ್ವೇಯರ್ ಹುದ್ದೆಗಳು ಸೇರಿದಂತೆ ಖಾಲಿಯಿರುವ ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಆರಂಭಿಸಲಾಗಿದೆ. ಸರ್ವೇಯರ್ ಹಾಗೂ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಖಾಲಿಯಿರುವಂತಹ 100ಕ್ಕೂ ತಹಶೀಲ್ದಾರ್‌ಗಳ ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಪಂಚಾಯತ್ ಮಟ್ಟದಲ್ಲಿ ಪಹಣಿ: ಭೂಮಿ ಯೋಜನೆಯಡಿ ಹೋಬಳಿ ಮಟ್ಟದಲ್ಲೆ ರೈತರಿಗೆ ಪಹಣಿ ನೀಡಲಾಗುತ್ತಿದೆ. ಆದರೆ, ಕಂಪ್ಯೂಟರ್ ಸರ್ವರ್‌ಗಳು ಪದೇ ಪದೇ ಕೈಕೊಡುವ ಹಿನ್ನೆಲೆಯಲ್ಲಿ ರೈತರು ಒಂದು ಪಹಣಿ ಪಡೆಯಲು ಹಲವು ಬಾರಿ ಸರಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಅವರು ಹೇಳಿದರು.
ಆದುದರಿಂದ, ರಾಜ್ಯದಲ್ಲಿ ಪಂಚಾಯತ್ ಮಟ್ಟದಲ್ಲಿ ಪಹಣಿ ನೀಡುವ ಕೆಲಸಕ್ಕೆ ಚಾಲನೆ ನೀಡಲಾಗುವುದು. ಹಾವೇರಿ ಜಿಲ್ಲೆಯಲ್ಲಿ ಈ ಸಂಬಂಧ ಪ್ರಾಯೋಗಿಕ ಯೋಜನೆ ಜಾರಿಗೆ ತರಲಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಪಹಣಿಯಲ್ಲಿರುವಂತಹ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸುವ ಅಧಿಕಾರ ಉಪ ವಿಭಾಗಾಧಿಕಾರಿಗೆ ಇದೆ. ತಹಶೀಲ್ದಾರ್‌ಗೂ ಈ ಅಧಿಕಾರವನ್ನು ನೀಡುವುದರಿಂದ ತ್ವರಿತಗತಿಯಲ್ಲಿ ಪಹಣಿಗಳಲ್ಲಿ ದೋಷಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಭೂ ಸುಧಾರಣಾ ಕಾಯ್ದೆಯಡಿ ಭೂಮಿಯನ್ನು ಮಾರುವುದು ಹಾಗೂ ಖರೀದಿ ಮಾಡುವುದು ಕಷ್ಟವಿತ್ತು. ಆದರೆ, ರಾಜ್ಯ ಸರಕಾರವು ಭೂಮಿ ಖರೀದಿಗೆ ಇದ್ದಂತಹ ಆದಾಯ ಮಿತಿ ಪ್ರಮಾಣವನ್ನು 25 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿರುವುದರಿಂದ, ಸಿಕ್ಕ ಸಿಕ್ಕವರು ಭೂಮಿಗಳನ್ನು ಖರೀದಿಸಿ, ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಪ್ರದೇಶದಲ್ಲಿನ ಸಾಗುವಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 4ರಿಂದ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಹ ಫಲಾನುಭವಿಗಳಿಗೆ ಒಟ್ಟು 6 ಲಕ್ಷ ಎಕರೆ ಭೂಮಿಯನ್ನು ಒದಗಿಸಬೇಕಾಗಿದೆ. ಈ ಹಿಂದೆ ತಿರಸ್ಕೃತವಾಗಿರುವ ಅರ್ಜಿಗಳು ಹಾಗೂ ಹೊಸದಾಗಿ ಅರ್ಜಿಗಳನ್ನು ಪಡೆದು ಪ್ರಸಕ್ತ ಸಾಲಿನ ಡಿಸೆಂಬರ್ ಒಳಗಾಗಿ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ







