ಅಂತರ್ಜಾತಿ ವಿವಾಹ ದೇಶಕ್ಕೆ ದೊಡ್ಡ ಕೊಡುಗೆ: ಅಗ್ನಿ ಶ್ರೀಧರ್
‘ಜಾತಿ-ಪ್ರೀತಿ: ಭವಿಷ್ಯದ ನೆಲೆ ಯಾವುದು?’ ಚಿಂತನಗೋಷ್ಠಿ

ಬೆಂಗಳೂರು, ಜು.2: ಇಂದಿನ ಯುವಜನತೆ ಅಂತರ್ಜಾತಿ ವಿವಾಹವಾಗುವುದರ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಬೇಕೆಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅಭಿಪ್ರಾಯಿಸಿದ್ದಾರೆ.
ಅಂತರ್ಜಾತಿ ವಿವಾಹವಾದ ಉನ್ನತಿ ಮತ್ತು ರಾಕೇಶ್‌ರವರಿಗೆ ಏರ್ಪಡಿಸಿದ್ದ ಔತಣಕೂಟದ ಸಲುವಾಗಿ ಸಮತಾ ಸೈನಿಕ ದಳ ಹಾಗೂ ನ್ಯಾಯಕ್ಕಾಗಿ ನಾವು ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ‘ಜಾತಿ-ಪ್ರೀತಿ: ಭವಿಷ್ಯದ ನೆಲೆ ಯಾವುದು?’ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಂಭವಿಸುವ ಪ್ರತಿಯೊಂದು ಆಗುಹೋಗುಗಳು ಜಾತಿಯ ಮೇಲೆ ನಿರ್ಧರಿತವಾಗಿರುತ್ತವೆೆ. ಅಧಿಕಾರಿಗಳ ನೇಮಕ, ಸಂಪತ್ತಿನ ಹಂಚಿಕೆ, ಭ್ರಷ್ಟಾಚಾರ, ದಲಿತರ ಮೇಲಿನ ಹಲ್ಲೆಗಳು, ಲೈಂಗಿಕ ಅತ್ಯಾಚಾರಗಳು ಸೇರಿದಂತೆ ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಇರುವುದೇ ಜಾತಿ ವ್ಯವಸ್ಥೆಯಲ್ಲಿ. ಹೀಗಾಗಿ ಜಾತಿ ನಿರ್ಮೂಲನೆ ಗೊಂಡರೆ ಮಾತ್ರವೇ ಭವಿಷ್ಯದ ಭಾರತವನ್ನು ಸುಭದ್ರವಾಗಿ ಕಟ್ಟಬಹುದು ಎಂದು ಅವರು ಹೇಳಿದರು.
ಪ್ರೀತಿಸುವುದು ಮನುಷ್ಯನ ಸಹಜ ಧರ್ಮ. ಅದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಆದರೆ, ಮೂಲಭೂತವಾದಿಗಳು ಪ್ರೀತಿಗೆ ದೊಡ್ಡ ಅಡ್ಡಗೋಡೆಯಾಗಿದ್ದು, ಪ್ರೀತಿಸುವ ಯುವ ಜನತೆಗೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದ್ದಾರೆ. ಹೀಗಾಗಿ ಪ್ರೀತಿಸಿ ಮದುವೆಯಾಗಲು ಬಯಸುವ ಯುವ ಪ್ರೇಮಿಗಳಿಗೆ ಜನಪರ ಸಂಘಟನೆಗಳು ಬೆಂಬಲ ಕೊಡಬೇಕೆಂದು ಅವರು ಅಗ್ನಿ ಶ್ರೀಧರ್ ಹೇಳಿದರು.
ಹಿರಿಯ ಲೇಖಕಿ ಲಲಿತಾ ನಾಯಕ್ ಮಾತನಾಡಿ, ಜಾತಿ ಎನ್ನುವುದು ದೇಶಕ್ಕಂಟಿದ ದೊಡ್ಡ ಪಿಡುಗಾಗಿದೆ. ವಿಶ್ವದ ಎಲ್ಲ ದೇಶಗಳು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದೆ. ಆದರೆ, ಭಾರತದಲ್ಲಿ ಪ್ರೀತಿಸಿ ಮದುವೆಯಾದ ಒಂದೇ ಕಾರಣಕ್ಕೆ ತಂದೆ, ತಾಯಿಗಳೇ ತಮ್ಮ ಮಕ್ಕಳನ್ನು ಕೊಲೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್, ಗಾಂಧೀಜಿ ಸೇರಿದಂತೆ ಎಲ್ಲ ನಾಯಕರು ಜಾತಿ ನಿರ್ಮೂಲನೆಗೆ ಪಣ ತೊಟ್ಟಿದ್ದರು. ಅಂತರ್ಜಾತಿ ವಿವಾಹವೊಂದೇ ಜಾತಿ ನಾಶಕ್ಕಿರುವ ಪ್ರಮುಖ ಮಾರ್ಗವೆಂದು ನಂಬಿದ್ದರು. ಅವರ ಆಶಯದಂತೆ ಅಂತರ್ಜಾತಿ ವಿವಾಹವಾಗುವ ಯುವ ದಂಪತಿಯನ್ನು ಬೆಂಬಲಿಸಬೇಕು. ಹಾಗೂ ಅವರಿಗೆ ಅಗತ್ಯವಿರುವ ನೆರವನ್ನು ನೀಡುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಸಾಮಾಜಿಕ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಜಾನಪದ ಗಾಯಕ ಬಾನಂದೂರು ಕೆಂಪಯ್ಯ, ದಲಿತ ಮುಖಂಡ ವಿ.ನಾಗರಾಜ್, ವಕೀಲ ಅನಂತ್ ನಾಯಕ್, ರುದ್ರಪ್ಪ ಹನಗವಾಡಿ ಮತ್ತಿತರರು ಉಪಸ್ಥಿತರಿದ್ದರು.
ಜಾತಿ ನಿರ್ಮೂಲನೆಗೆ ಅಂತರ್ಜಾತಿ ವಿವಾಹವೊಂದೇ ಪರಿಹಾರ. ಹೀಗಾಗಿ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸು ವುದು ಪ್ರಜ್ಞಾವಂತ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಪ್ರೀತಿಸಿ ಮದುವೆಯಾಗಿರುವ ದಂಪತಿಗಳನ್ನು ಒಂದು ವೇದಿಕೆಗೆ ತರುವ ನಿಟ್ಟಿನಲ್ಲಿ ಮುಂದಿನ ಆಗಸ್ಟ್‌ನಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ ನಡೆಸಲಾಗುವುದು.
-ಡಾ.ಎಂ.ವೆಂಕಟಸ್ವಾಮಿ, ರಾಜ್ಯಾಧ್ಯಕ್ಷ, ಸಮತಾ ಸೈನಿಕ ದಳ.







