‘ಗಾಯಾಳುಗಳನ್ನು ರಕ್ಷಿಸಿದವರಿಗೆ ಬಹುಮಾನ ನೀಡುವ ವಿಶೇಷ ಕಾಯ್ದೆ ಜಾರಿ’

ತುಮಕೂರು, ಜು.2: ರಾಜ್ಯ ಸರಕಾರ ಅನಿರೀಕ್ಷಿತವಾಗಿ ಅಪಘಾತಕ್ಕೀಡಾದ ವ್ಯಕ್ತಿಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ನೆರವಾಗುವವರಿಗೆ ಸೂಕ್ತ ಬಹುಮಾನ ನೀಡುವ ಉದ್ದೇಶದಿಂದ ಕರ್ನಾಟಕ ಗುಡ್ ಸಮರಿಟನ್ ಅಂಡ್ ಮೆಡಿಕಲ್ ಪ್ರೊಫೆಷನಲ್ಸ್ ಪ್ರೊಟೆಕ್ಟ್ ಎಂಬ ಹೊಸ ಕಾಯ್ದೆಯೊಂದನ್ನು ರೂಪಿಸಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ವಿವಿ ಆವರಣದಲ್ಲಿಂದು ಕೋಟಿ ವೃಕ್ಷ ಆಂದೋಲನದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅಪಘಾತಗಳು ಸಂಭವಿಸಿದಾಗ ಜೀವನ್ಮ ರಣದ ಮಧ್ಯೆ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿರುವ ವ್ಯಕ್ತಿಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗಾಗಿ ನೆರವು ನೀಡಲು ಕೋರ್ಟು-ಕಟ್ಟಳೆಗಳಿಗೆ ಹೆದರಿ ಜನರು ಹಿಂಜರಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಹೊಸ ಕಾನೂನು ರೂಪಿಸಲಾಗಿದ್ದು, ಬರುವ ಸದನದಲ್ಲಿ ಈ ವಿಷಯವನ್ನು ಮಂಡಿಸಿ, ಮುಖ್ಯಮಂತ್ರಿಗಳ ಹರೀಶ್ ಸಾಂತ್ವನ ಯೋಜನೆಗೆ ಒಳಪಡಿಸಲಾಗುವುದು ಎಂದರು. ಇಡೀ ದೇಶದಲ್ಲಿ ಯಾವ ರಾಜ್ಯವೂ ಇಂತಹ ಕಾನೂನನ್ನು ಈವರೆಗೂ ಜಾರಿಗೆ ತಂದಿಲ್ಲ. ನಿಯಮಗಳನ್ನು ರೂಪಿಸುವಾಗ ಬಹುಮಾನ ಮೊತ್ತವನ್ನು ನಿಗದಿಗೊಳಿಸಲಾಗುವುದು. ಈ ಹೊಸ ಕಾಯ್ದೆಯನ್ವಯ ಅಪಘಾತಕ್ಕೊಳಗಾಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವ್ಯಕ್ತಿಗಳಿಗೆ ವೆಚ್ಚವನ್ನು ಕೂಡಲೇ ಭರಿಸಲಾಗುವುದು.





