ಬೆಳ್ತಂಗಡಿ: ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಬೆಳ್ತಂಗಡಿ, ಜು.2: ಬೆಳ್ತಂಗಡಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ವಿಶೇಷ ಸಭೆಯು ಶಾಸಕ ಕೆ. ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
94ಸಿ ಅರ್ಜಿ ವಿಲೇವಾರಿಯ ಬಗ್ಗೆ ಸಾಕಷ್ಟು ಅರ್ಜಿಗಳು ಮತ್ತು ದೂರುಗಳು ಸಭೆಯಲ್ಲಿ ನೋಂದಾವಣೆಯಾಯಿತು. ದ.ಕ. ಅಪರ ಜಿಲ್ಲಾಧಿಕಾರಿ ಕುಮಾರ್‌ಅರ್ಜಿಗಳ ಹಾಗೂ ದೂರುಗಳ ಬಗ್ಗೆ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೆ ವೌನವಾಗಿದ್ದ ತಹಶೀಲ್ದಾರರ ಬಗ್ಗೆ ಸದಸ್ಯರುಗಳು, ಸಾರ್ವಜನಿಕರು ಆಕ್ರೋಶಗೊಂಡ ಘಟನೆಯೂ ನಡೆಯಿತು.
94ಸಿ ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಅಧಿಕಾರಿಗಳ ಲಂಚ ಬೇಡಿಕೆಯ ಬಗ್ಗೆ ಜಿ.ಪಂ. ಸದಸ್ಯ ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ಮಮತಾ ಶೆಟ್ಟಿ, ತಾ.ಪಂ. ಸದಸ್ಯರಾದ ವಿಜಯಗೌಡ, ಶಶಿಧರ ಎಂ., ಸುಧಾಕರ ಎಲ್., ಲಕ್ಷ್ಮೀ ನಾರಾಯಣ, ಬಳಂಜ ಗ್ರಾ.ಪಂ. ಸದಸ್ಯ ಪಿ. ಕೆ. ಚಂದ್ರಶೇಖರ್ ಮೊದಲಾದವರು ಸಭೆಯ ಗಮನಕ್ಕೆ ತಂದರು.
ಇದಕ್ಕುತ್ತರಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್, ಸರಕಾರವು ಎಲ್ಲಾ ಸಂಬಂಧಪಟ್ಟ ತಹಶೀಲ್ದಾರರಿಗೆ 94ಸಿ ಅರ್ಜಿ ವಿಲೇವಾರಿಯ ಬಗ್ಗೆ ಸ್ಪಷ್ಟ ಸುತ್ತೋಲೆ ಕಳುಹಿಸಿದ್ದು ಇದರಂತೆ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಸುತ್ತೋಲೆ ಬಗ್ಗೆ ಯಾವುದೇ ಅನುಷ್ಠಾನವಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಎಲ್ಲಾ ಅರ್ಜಿಗಳನ್ನು ತಹಶೀಲ್ದಾರ್ ಪರಿಶೀಲನೆ ಮಾಡಬೇಕು. ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಪ್ರತೀ ಗ್ರಾಮ ಮಟ್ಟದಲ್ಲಿ ತಹಶೀಲ್ದಾರ್ ತೆರಳಿ ಅರ್ಜಿ ವಿಲೇವಾರಿ ಮಾಡಬೇಕು. ಇದರ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಮತ್ತು ಮಾಧ್ಯಮಗಳಲ್ಲಿ ಮಾಹಿತಿ ನೀಡಬೇಕು ಎಂದು ಆದೇಶಿಸಿದರು.
ತಾಲೂಕಿನಲ್ಲಿ 11 ಸಾವಿರ ಅರ್ಜಿಗಳು ಬಂದಿದ್ದು ಇದರಲ್ಲಿ 2 ಸಾವಿರ ಅರ್ಜಿಗಳು ಮಾತ್ರ ವಿಲೇವಾರಿಯಾಗಿದ್ದು 9 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ಕೂಡಲೇ ಇದನ್ನು ವಿಲೇವಾರಿ ಮಾಡಬೇಕೆಂದು ಆದೇಶಿಸಿದರು.
ವೇಣೂರು ಕೆರೆ ಒತ್ತುವರಿ, ಅಕ್ರಮ ಸಕ್ರಮ ಮಂಜೂರುಗೊಂಡರೂ ಅಧಿಕಾರಿಗಳು ಹಕ್ಕು ಪತ್ರ ನೀಡುತ್ತಿಲ್ಲ. ಆರ್‌ಟಿಸಿಯಲ್ಲಿ ದಿನಕ್ಕೊಂದು ವಿವರಗಳು ನಮೂದಿಸಲಾಗುತ್ತಿದೆ. 94ಸಿ ಅರ್ಜಿಗೆ ಮನೆ ನಂಬರ್ ಕೇಳುವ ಬಗ್ಗೆ, ಇತರ ದಾಖಲೆಗಳನ್ನು ನೀಡುವಂತೆ ಸತಾಯಿಸುತ್ತಾರೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ತಾಲೂಕಿನ ಕಂದಾಯ ಇಲಾಖೆಯು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಲಂಚಕ್ಕಾಗಿ ಮಾತ್ರ ಕೆಲವು ಅಧಿಕಾರಿಗಳು ಕಚೇರಿಗೆ ಬರುತ್ತಾರೆ. ಪ್ರಕೃತಿ ವಿಕೋಪ ಪರಿಹಾರ ಚೆಕ್‌ನಲ್ಲೂ ಕಮಿಷನ್ ವ್ಯವಹಾರ ನಡೆಯುತ್ತಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಾಕಿ ಉಳಿದಿರುವ ಕಡತಗಳನ್ನು ಪರಿಶೀಲಿಸಿ ಯಾವ ಕಾರಣಕ್ಕೆ ಬಾಕಿ ಉಳಿದಿದೆ ಎಂದು ಪರಿಶೀಲನೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ತಹಶೀಲ್ದಾರ್ ಎಚ್. ಪ್ರಸನ್ನಮೂರ್ತಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ. ಆರ್. ನರೇಂದ್ರ ಉಪಸ್ಥಿತರಿದ್ದರು.







