ಕುಮಾರನ ವಿರುದ್ಧ ಮಧು ವಾಗಾ್ದಳಿ!
ಮುಂದುವರಿದ ಬಂಗಾರಪ್ಪಪುತ್ರರ ವಾಕ್ಸಮರ

ಶಿವಮೊಗ್ಗ, ಜು. 2: ಎಸ್. ಬಂಗಾರಪ್ಪ ಪುತ್ರರ ನಡುವಿನ ವಾಕ್ಸಮರ ಮುಂದುವರಿದಿದೆ. ಇತ್ತೀಚೆಗೆ ಮಧು ಬಂಗಾರಪ್ಪವಿರುದ್ಧ ಲೇವಡಿ ಮಾಡಿದ್ದ ಕುಮಾರ್ ಬಂಗಾರಪ್ಪಗೆ ಮಧು ತಿರುಗೇಟು ನೀಡಿದ್ದಾರೆ. ಅಶ್ವಮೇಧ ಕುದುರೆಯು ಕತ್ತೆಯಾಗಿ ಪರಿವರ್ತಿತವಾಗಿದೆ ಎಂದು ಕುಟುಕಿದ್ದಾರೆ. ಇತ್ತೀಚೆಗೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಮ್ಮ ಅಭಿನಯದ ‘ದೇವಿ’ ಸಿನೆಮಾ ಬಿಡುಗಡೆಯಾಗದಿರುವ ಬಗ್ಗೆ ಕುಮಾರ್ ಬಂಗಾರಪ್ಪ ಲೇವಡಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾವು ನಾಯಕ ನಟನಾಗಬೇಕೆಂಬುವುದು ತಮ್ಮ ತಂದೆ-ತಾಯಿಯ ಅಭಿಲಾಷೆಯಾಗಿತ್ತು. ಅದರಂತೆ ‘ದೇವಿ’ ಚಿತ್ರ ಮಾಡಿದ್ದೆ. ಆದರೆ ಆ ಚಿತ್ರ ವೀಕ್ಷಿಸಲು ತಮ್ಮ ತಂದೆ-ತಾಯಿಯವರು ಇಲ್ಲವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಚಿತ್ರ ಬಿಡುಗಡೆ ಮಾಡಿಲ್ಲ ಎಂದರು. ಆತನನ್ನು ನಾಯಕನನ್ನಾಗಿ ಮಾಡಿಕೊಂಡು ಸಿನೆಮಾ ಮಾಡಲು ಯಾವೊಬ್ಬ ನಿರ್ಮಾಪಕನೂ ಮುಂದೆ ಬಂದಿರಲಿಲ್ಲ. ಕೊನೆಗೆ ತಾವೇ ನಿರ್ಮಾಪಕನಾಗಿ ಆತನನ್ನೂ ನಾಯಕನನ್ನಾಗಿ ಮಾಡಿ ದುಡ್ಡು ಕಳೆದು ಕೊಂಡೆ. ಇನ್ನೊಂದು ಅಶ್ವಮೇಧ ಚಿತ್ರ ತೆಗೆಯಬೇಕಾದರೆ ಮತ್ತೆ ಮಧು ಬಂಗಾರಪ್ಪನೇ ಬರಬೇಕು. ಅಶ್ವಮೇಧ ಕುದುರೆ ಕತ್ತೆಯಾಗಿ ಪರಿವರ್ತಿ ತವಾಗಿದೆ ಎಂದು ಕುಮಾರ್ ಬಂಗಾರಪ್ಪರನ್ನು ಲೇವಡಿ ಮಾಡಿದರು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಬಂಗಾರಪ್ಪರವರ ರೀತಿಯಲ್ಲಿ ಬಣ್ಣ ಬಣ್ಣದ ಬಟ್ಟೆ, ಕನ್ನಡಕ ಹಾಕಿಕೊಂಡರೆ ಅವರು ಬಂಗಾರಪ್ಪ ಆಗಲು ಸಾಧ್ಯವಿಲ್ಲ. ಅವರಿಗೆ ಸಾಗರದ ಜನತೆ ಸೋಲಿನ ರುಚಿ ತೋರಿಸಿ ಮನೆಗೆ ಕಳುಹಿಸಿದ್ದಾರೆ. ನನ್ನ ಕ್ಷೇತ್ರಕ್ಕೆ ಬಂದು ಇಲ್ಲ ಸಲ್ಲದ ಆರೋಪ ಮಾಡುವುದನ್ನು ಅವರು ಬಿಡಲಿ ಎಂದರು.
ಜೆಡಿಎಸ್ ಬಲಿಷ್ಠ:
ಸೊರಬ ತಾಪಂಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆಯೇರಿದೆ. ಈ ಮೂಲಕ ಸೊರಬ ತಾಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾಗಿದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು. ಸೊರಬದಲ್ಲಿ ಜೆಡಿಎಸ್‌ನ್ನು ಸೋಲಿಸಬೇಕೆಂದು ಕಾಂಗ್ರೆಸ್ ಹಾಗೂ ಬಿಜೆಪಿ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಶಿಕಾರಿಪುರ ಶಾಸಕ ಬಿ.ವೈ. ರಾಘವೇಂದ್ರ ಸೊರಬಕ್ಕೆ ಬಂದು ಪ್ರಚಾರ ಮಾಡಿ, ಪಕ್ಷ ವನ್ನು ಗೆಲ್ಲಿಸುವ ಹೊಣೆ ಹೊತ್ತುಕೊಂಡರೂ ಬಿಜೆಪಿ ಬಹುಮತ ಪಡೆಯಲಿಲ್ಲ ಎಂದು ಟೀಕಿಸಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕಿ, ಜಿಪಂ ಸದಸ್ಯರಾದ ತಾರಾ, ವೀರೇಶ್, ಶಿವಲಿಂಗೇಗೌಡ, ಸೊರಬ ಜೆಡಿಎಸ್ ಮುಖಂಡರಾದ ಗಣಪತಿ, ಶಿಕಾರಿಪುರದ ಎಚ್.ಟಿ. ಬಳಿಗಾರ್, ನಿರಂಜನ್ ಉಪಸ್ಥಿತರಿದ್ದರು.







