ಕೋಳಿಫಾರಂ ತೆರವಿಗೆ ಆಗ್ರಹಿಸಿ ಗ್ರಾಮಸ್ಥರ ಧರಣಿ
ಕ್ರಿಮಿಕೀಟಗಳ ಹಾವಳಿಯಿಂದ ದುಸ್ತರವಾಗಿರುವ ಗ್ರಾಮಸ್ಥರ ಬದುಕು
ಶಿವಮೊಗ್ಗ, ಜು.2: ಶಿವಮೊಗ್ಗ ತಾಲೂಕಿನ ಕಡೇಕಲ್ ಗ್ರಾಪಂ ವ್ಯಾಪ್ತಿಯ ಯರಗನಾಳ್ ಗ್ರಾಮದಲ್ಲಿರುವ ಕೋಳಿಫಾರಂ ತೆರವುಗೊಳಿಸಬೇಕೆಂದು ಆಗ್ರಹಿಸಿ, ಶನಿವಾರ ನಗರದ ಜಿಪಂ ಕಚೇರಿ ಮುಂಭಾಗ ಧರಣಿ ನಡೆಸಿದ ಸ್ಥಳೀಯ ಗ್ರಾಮಸ್ಥರು ಜಿಪಂ ಉಪ ಕಾರ್ಯದರ್ಶಿಗಳಾದ ಕೆ.ಎಸ್.ಮಣಿ ಹಾಗೂ ಚಂದ್ರಶೇಖರ್‌ರವರಿಗೆ ಮನವಿ ಪತ್ರ ಅರ್ಪಿಸಿದರು. ಈ ಹಿಂದೆ ನಾಗರಿಕರ ವಿರೋಧದ ಹೊರತಾಗಿಯೂ ಕೋಳಿಫಾರಂ ಸ್ಥಾಪನೆಗೆ ಅವಕಾಶ ನೀಡಲಾಗಿತ್ತು. ಪ್ರಸ್ತುತ ಕೋಳಿಫಾರಂನಿಂದ ನೊಣ, ಇತರೆ ಕ್ರಿಮಿಕೀಟಗಳ ಹಾವಳಿ ವಿಪರೀತವಾಗಿದೆ. ಇದರಿಂದ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳು ಗ್ರಾಮಸ್ಥರಲ್ಲಿ ಕಂಡುಬರುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ನೊಣ, ಕ್ರಿಮಿಕೀಟಗಳ ಹಾವಳಿಯಿಂದ ಜೀವನ ನಡೆಸುವುದೆ ದುಸ್ತರವಾಗಿ ಪರಿಣಮಿಸಿದೆ. ಮನೆಗಳಲ್ಲಿ ನೆಮ್ಮದಿಯಾಗಿ ಊಟ ಮಾಡುವುದಿರಲಿ, ನೀರು ಕೂಡ ಕುಡಿಯಲು ಆಗುತ್ತಿಲ್ಲ. ಎಲ್ಲೆಲ್ಲೂ ನೊಣಗಳ ಹಾವಳಿ ಕಂಡುಬರುತ್ತಿದೆ. ನಮ್ಮ ಗೋಳು ಆಲಿಸುವವರ್ಯಾರು ಇಲ್ಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಕೋಳಿಫಾರಂ ತೆರವುಗೊಳಿಸುವಂತೆ ಹಲವು ಬಾರಿ ಜಿಪಂ ಆಡಳಿತಕ್ಕೆ ಮನವಿ ಅರ್ಪಿಸಲಾಗಿದೆ. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಜನರು ನಾನಾ ರೋಗಕ್ಕೆ ತುತ್ತಾಗುವಂತಹಗಿದ್ದು, ಜನರ ಜೀವದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ತತ್‌ಕ್ಷಣವೇ ಕೋಳಿಫಾರಂ ತೆರವುಗೊಳಿಸಲು ಆಡಳಿತ ವ್ಯವಸ್ಥೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಪಂ ಆಡಳಿತದ ವಿರುದ್ಧ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥರ ಅಹವಾಲು ಆಲಿಸಿದ ನಂತರ ಉಪ ಕಾರ್ಯದರ್ಶಿಗಳಾದ ಕೆ.ಎಸ್.ಮಣಿ ಹಾಗೂ ಚಂದ್ರಶೇಖರ್‌ರವರು ಮಾತನಾಡಿ, ಈ ಹಿಂದೆ ಕೋಳಿಫಾರಂ ತೆರವಿಗೆ ಕ್ರಮಕೈಗೊಳ್ಳಲಾಗಿತ್ತು. ಆದರೆ ಸಂಬಂಧಿಸಿದವರು ನ್ಯಾಯಾಲಯಕ್ಕೆ ತೆರಳಿ ತಡೆಯಾಜ್ಞೆ ತಂದಿದ್ದಾರೆ. ಗ್ರಾಪಂ ಆಡಳಿತದಿಂದ ವಕೀಲರ ನೇಮಕ ಮಾಡಿ ತಡೆಯಾಜ್ಞೆ ತೆರವಿಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮನವಿ ಅರ್ಪಿಸುವ ಸಂದಭರ್ದಲ್ಲಿ ಮಾಜಿ ಜಿಪಂ ಸದಸ್ಯ ಪ್ರೇಂಕುಮಾರ್, ಕಡೇಕಲ್ಲು ಗ್ರಾಪಂ ಸದಸ್ಯ ಅಝೀಝ್ ಖಾನ್, ಉಪಾಧ್ಯಕ್ಷೆ ಸುಮಂಗಲಮ್ಮ, ಸ್ಥಳೀಯ ಮುಖಂಡರಾದ ಸುಶೀಲಮ್ಮ, ರವಿ, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.





