‘ರಮಝಾನ್ ದಾನ ಧರ್ಮದಿಂದ ದುಪ್ಪಟ್ಟು ಪ್ರತಿಫಲ’

ಮೂಡಿಗೆರೆ, ಜು.2: ಅರ್ಹ ಉಪವಾಸಿ ಕುಟುಂಬಕ್ಕೆ ಇಫ್ತಾರ್ ಕಿಟ್‌ಗಳನ್ನು, ಧಾನ ಧರ್ಮಗಳನ್ನು ಕೈಗೊಂಡರೆ ರಮಝಾನ್ ತಿಂಗಳಲ್ಲಿ ಅದರ ಪ್ರತಿಫಲ ದುಪ್ಪಟ್ಟು ದೊರಕಲಿದೆ ಎಂದು ಕರ್ನಾಟಕ ಬ್ಯಾರಿ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್ ತಿಳಿಸಿದರು.
ಪಟ್ಟಣದ ಜಾಮಿಯಾ ಶಾದಿಮಹಲ್‌ನಲ್ಲಿ ಯು.ಎ.ಇ. ಮೂಡಿಗೆರೆ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ನಡೆದ ರಮಝಾನ್ ಮಾಸದ ಇಫ್ತಾರ್ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬಡವರ್ಗದ ಮಕ್ಕಳ ಶಿಕ್ಷಣ ಮತ್ತು ರೋಗಿಗಳ ಸೇವೆಯಲ್ಲಿ ಯು.ಎ.ಇ ಮೂಡಿಗೆರೆ ವೆಲ್‌ಫೇರ್ ಅಸೋಸಿಯೇಶನ್ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.
ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಲೋಕವಳ್ಳಿ ರಮೇಶ್ ಮಾತನಾಡಿ, ಎಲ್ಲ ಧರ್ಮಗಳು ದಾನ ಧರ್ಮಗಳಂತಹ ಕಾರ್ಯಗಳಿಂದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣಬೇಕು, ಆ ಕಾರ್ಯದಲ್ಲಿ ಮುಸ್ಲಿಮ್ ಸಂಘಟನೆಗಳು ಮುಂದಿವೆ ಎಂದರು. ಬಿಎಸ್ಪಿ ಜಿಲ್ಲಾಧ್ಯಕ್ಷ ಝಾಕಿರ್ ಹುಸೈನ್ ಮಾತನಾಡಿದರು.
400 ಕ್ಕೂ ಅಧಿಕ ಕುಟುಂಬಕ್ಕೆ ರಮಝಾನ್ ಕಿಟ್ ವಿತರಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಮತ್ತು ಮದುವೆಗಾಗಿ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಹಂಡುಗುಳಿಯ ಉಮರಬ್ಬ ಹಾಜಿ ವಹಿಸಿದ್ದರು.ಮೌಲನಾ ವಾಜೀದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಹಮಬ್ಬ, ಬಿ.ಖಲೀಮುಲ್ಲಾ, ಪ್ರಾರುಜಾನ್, ಸಿ.ಕೆ.ಇಬ್ರಾಹೀಂ, ಕಾರ್ಯಾಧ್ಯಕ್ಷ ಅಬ್ರಾರ್, ಅನ್ವರ್ ಸಾದಿಕ್ ಮುಸ್ಲಿಯಾರ್, ಇಕ್ಬಾಲ್ ಅಹ್ಮದ್, ಮತ್ತಿತರರು ಉಪಸ್ಥಿತರಿದ್ದರು.







