ಬಾಂಗ್ಲಾದೇಶ ಪ್ರವಾಸ ರದ್ದು: ಇಸಿಬಿ ಗಂಭೀರ ಚಿಂತನೆ
ಕಾರ್ಡಿಫ್(ಇಂಗ್ಲೆಂಡ್), ಜು.2: ಬಾಂಗ್ಲಾದೇಶದಲ್ಲಿ ಭಯೋತ್ಪಾದಕರ ದಾಳಿ ನಡೆದು 20 ವಿದೇಶೀಯರು ಹತರಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಬಾಂಗ್ಲಾದೇಶ ಪ್ರವಾಸವನ್ನು ರದ್ದುಪಡಿಸಲು ಗಂಭೀರ ಚಿಂತನೆ ನಡೆಸುತ್ತಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಅಪ್‌ಮಾರ್ಕೆಟ್‌ನ ರೆಸ್ಟೊರೆಂಟ್‌ಗೆ ದಾಳಿ ನಡೆಸಿದ ಆರು ಜನರಿದ್ದ ಉಗ್ರಗಾಮಿಗಳ ತಂಡ 20 ವಿದೇಶಿಯರನ್ನು ಒತ್ತೆ ಸೆರೆಯಲ್ಲಿಟ್ಟುಕೊಂಡಿದ್ದಲ್ಲದೆ ಅವರನ್ನು ಸಾಯಿಸಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿದ್ದ ಬಾಂಗ್ಲಾದೇಶದ ಕಮಾಂಡೊಗಳು ಉಗ್ರಗಾಮಿಗಳನ್ನು ಸಾಯಿಸಿದ್ದಾರೆ.
ಇಂಗ್ಲೆಂಡ್ ತಂಡ ಸೆ.30 ರಿಂದ ಮೂರು ಏಕದಿನ ಸರಣಿ ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ಬಾಂಗ್ಲಾದೇಶಕ್ಕೆ ತೆರಳಲು ನಿರ್ಧರಿಸಿತ್ತು.
ಇಂಗ್ಲೆಂಡ್ ಕ್ರಿಕೆಟ್ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ಬ್ರಿಟನ್ ಸರಕಾರ ಬಾಂಗ್ಲಾದೇಶದ ಪರಿಸ್ಥಿತಿ ಗಮನಿಸಿ ಬಾಂಗ್ಲಾದೇಶ ಪ್ರವಾಸವನ್ನು ರದ್ದುಪಡಿಸುವ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ನಾವು ಮುಂಬರುವ ವಾರ ಹಾಗೂ ತಿಂಗಳುಗಳ ಕಾಲ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಿದ್ದೇವೆ. ಇಂಗ್ಲೆಂಡ್ ತಂಡಕ್ಕೆ ನೀಡಲಾಗುವ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ತಪಾಸಣಾ ತಂಡವನ್ನು ಕಳುಹಿಸಿಕೊಡಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.







