ಅಜಯ್ ಜಯರಾಮ್, ಪ್ರಣೀತ್ ಸೆಮಿಫೈನಲ್‌ಗೆ
ಕೆನಡಾ ಓಪನ್ ಜಿಪಿ ಬ್ಯಾಡ್ಮಿಂಟನ್ ಟೂರ್ನಮೆಂಟ್

ಕಾಲ್ಗರಿ(ಕೆನಡಾ), ಜು.2: ಭಾರತದ ಶಟ್ಲರ್‌ಗಳಾದ ಅಜಯ್ ಜಯರಾಮ್ ಹಾಗೂ ಬಿ.ಸಾಯ್ ಪ್ರಣೀತ್ 55,000 ಯುಎಸ್ ಡಾಲರ್ ಬಹುಮಾನ ಮೊತ್ತದ ಕೆನಡಾ ಓಪನ್ ಜಿಪಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಯರಾಮ್ ತಮ್ಮದೇ ದೇಶದ ಹರ್ಶೀಲ್ ದಾನಿ ಅವರನ್ನು 21-18, 19-21, 21-8 ಗೇಮ್‌ಗಳ ಅಂತರದಿಂದ ಮಣಿಸಿದರು.
47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಯ ಸಾಧಿಸಿರುವ ಎರಡು ಬಾರಿಯ ಡಚ್ ಓಪನ್ ಚಾಂಪಿಯನ್ ಜಯರಾಮ್ ಮುಂದಿನ ಸುತ್ತಿನಲ್ಲಿ ಕೊರಿಯಾದ ಲೀ ಹ್ಯೂನ್‌ರನ್ನು ಎದುರಿಸಲಿದ್ದಾರೆ.
ಕೇವಲ 33 ನಿಮಿಷಗಳಲ್ಲಿ ಕೊನೆಗೊಂಡ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೆ ಶ್ರೇಯಾಂಕದ ಪ್ರಣೀತ್ ಇಸ್ಟೋನಿಯದ ರಾವುಲ್ ಮಸ್ಟ್‌ರನ್ನು 21-14, 21-16 ಗೇಮ್‌ಗಳ ಅಂತರದಿಂದ ಸೋಲಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದರು.
ಮುಂದಿನ ಸುತ್ತಿನಲ್ಲಿ ಫ್ರೆಂಚ್‌ನ ಬ್ರೈಸ್ ಲೆವೆರ್ಡೆಝ್‌ರನ್ನು ಎದುರಿಸಲಿದ್ದಾರೆ. ಲೆವೆರ್ಡೆಝ್ ಭಾರತದ ಎರಡನೆ ಶ್ರೇಯಾಂಕದ ಎಚ್.ಎಸ್.ಪ್ರಣಯ್‌ರನ್ನು 22-20, 21-23, 18-21 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಋತ್ವಿಕಾ ಶಿವಾನಿ ಹಾಗೂ ತನ್ವಿ ಲಾಡ್ ಹೋರಾಟಕ್ಕೆ ತೆರೆ ಬಿದ್ದಿದೆ. ಋತ್ವಿಕಾ ಬಲ್ಗೇರಿಯದ 4ನೆ ಶ್ರೇಯಾಂಕದ ಲಿಂಡಾ ಝೆಟ್‌ಚಿರಿ ವಿರುದ್ಧ 16-21, 12-21 ಗೇಮ್‌ಗಳ ಅಂತರದಿಂದ ಶರಣಾದರು.
ತನ್ವಿ ಅಮೆರಿಕದ ಐರಿಸ್ ವಾಂಗ್ ವಿರುದ್ಧ ಕಠಿಣ ಹೋರಾಟ ನೀಡಿದ್ದರೂ 16-21, 21-15, 10-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.







