ಉಗ್ರರ ಮೂಲೋತ್ಪಾಟನೆ: ಹಸೀನಾ ಪ್ರತಿಜ್ಞೆ
ಢಾಕಾ ಹತ್ಯಾಕಾಂಡಕ್ಕೆ ಬಾಂಗ್ಲಾ ಪ್ರಧಾನಿ ಆಕ್ರೋಶ
ಢಾಕಾ,ಜು.2: ಇಲ್ಲಿನ ರೆಸ್ಟೋರೆಂಟೊಂದರಲ್ಲಿ ಐಸಿಸ್ ಉಗ್ರರು 20 ಮಂದಿಯನ್ನು ಹತ್ಯೆಗೈದ ಘಟನೆಯ ಬೆನ್ನಲ್ಲೇ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಶನಿವಾರ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದಾರೆ. ಭಯೋತ್ಪಾದಕರನ್ನು ಹಾಗೂ ಹಿಂಸಾತ್ಮಕ ತೀವ್ರವಾದಿಗಳನ್ನು ಮೂಲೋತ್ಪಾಟನೆ ಮಾಡಲು ತನ್ನ ಸರಕಾರವು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆಯೆಂದು ಅವರು ಘೋಷಿಸಿದ್ದಾರೆ.
‘‘ಇದೊಂದು ಅತ್ಯಂತ ಹೇಯ ಕೃತ್ಯವಾಗಿದೆ. ಇವರು ಎಂತಹ ಮುಸ್ಲಿಮರು? ಅವರಿಗೆ ಧರ್ಮವೆಂಬುದೇ ಇಲ್ಲ’’ ಎಂದು ಹಸೀನಾ ಟಿವಿ ಸಂದರ್ಶನವೊಂದರಲ್ಲಿ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಅವರು ಜನರನ್ನು ಕೊಂದ ರೀತಿಯಂತೂ ಅತ್ಯಂತ ಬರ್ಬರವಾದುದು. ಉಗ್ರರಿಗೆೆ ಯಾವುದೇ ಧರ್ಮವಿಲ್ಲ... ಭಯೋತ್ಪಾದನೆಯೇ ಅವರ ಧರ್ಮವಾಗಿದೆ’’ ಎಂದು ಹಸೀನಾ ಕಿಡಿಕಾರಿದ್ದಾರೆ.
ಭಯೋತ್ಪಾದಕರ ವಿರುದ್ಧ ತೀವ್ರ ಪ್ರತಿರೋಧವನ್ನು ಪ್ರದರ್ಶಿಸಬೇಕೆಂದು ದೇಶದ ಪ್ರಜೆಗಳಿಗೆ ಅವರು ಕರೆ ನೀಡಿದರು.
ಉಗ್ರರನ್ನು ನಾಶಪಡಿಸಲು ಸಾಧ್ಯವಾಗಿದ್ದಕ್ಕಾಗಿ ಹಾಗೂ ಹಲವು ಮಂದಿ ಒತ್ತೆಯಾಳುಗಳನ್ನು ರಕ್ಷಿಸಿದ್ದಕ್ಕಾಗಿ ನಾನು ಅಲ್ಲಾಹುವಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ’’ ಎಂದು ಹಸೀನಾ ಹೇಳಿದ್ದಾರೆ. ಯಾವುದೇ ಭಯೋತ್ಪಾದಕರಿಗೂ ಸ್ಥಳದಿಂದ ಪರಾರಿಯಾಗಲು ಸಾಧ್ಯವಾಗಿಲ್ಲ. ಅವರಲ್ಲಿ ಆರು ಮಂದಿಯನ್ನು ಹತ್ಯೆಗೈಯಲಾಗಿದ್ದು, ಓರ್ವನನ್ನು ಜೀವಂತ ಸೆರೆಹಿಡಿಯಲಾಗಿದೆ’’ ಎಂದವರು ಹೇಳಿದ್ದಾರೆ. ಆದರೆ ಉಗ್ರರು ಎಷ್ಟು ಮಂದಿಯನ್ನು ಒತ್ತೆಸೆರೆಯಿರಿಸಿದ್ದರೆಂಬುದನ್ನು ವಿವರಿಸಲು ಹಸೀನಾ ನಿರಾಕರಿಸಿದ್ದಾರೆ.







