ಭಯೋತ್ಪಾದನೆ ಪ್ರಾಯೋಜಕ ದೇಶಗಳನ್ನು ಉತ್ತರದಾಯಿಯನ್ನಾಗಿಸಬೇಕು: ಭಾರತ
ವಿಶ್ವಸಂಸ್ಥೆ, ಜು.2: ಭಯೋತ್ಪಾದಕ ದಾಳಿಗಳ ಪಿತೂರಿದಾರರು, ಅದರ ಪ್ರಾಯೋಜಕ ದೇಶಗಳು ಹಾಗೂ ಭಯೋತ್ಪಾದಕರಿಗೆ ಸುರಕ್ಷಿತ ನೆಲೆಯನ್ನು ಒದಗಿಸುವವರನ್ನು ಉತ್ತರದಾಯಿಗಳನ್ನಾಗಿಸಬೇಕೆಂದು ಭಾರತವು ವಿಶ್ವಸಂಸ್ಥೆಯಲ್ಲಿ ಆಗ್ರಹಿಸಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಂಬಂಧ ಸಮಗ್ರ ಸನದನ್ನು (ಸಿಸಿಐಟಿ) ಶೀಘ್ರವೇ ಅಳವಡಿಸಬೇಕೆಂದು ಅದು ಕರೆ ನೀಡಿದೆ.
‘‘ನಾವೆಲ್ಲರೂ ಕಳವಳಿಸಲೇಬೇಕಾದ ಜಾಗತಿಕ ಸ್ವರೂಪದ ಎಲ್ಲ ರೀತಿಯ ಬೆದರಿಕೆಗಳಲ್ಲಿ ಭಯೋತ್ಪಾದನೆಯು ಅತ್ಯಂತ ಹೆಚ್ಚು ಗಂಭೀರ ವಿಷಯವಾಗಿದೆ. ಅದು ವಿಶ್ವಾದ್ಯಂತ ಅಮಾಯಕರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿದೆ’’ಎಂದು ಶುಕ್ರವಾರ ನಡೆದ ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದನೆ ನಿಗ್ರಹ ಕಾರ್ಯವ್ಯೆಹದ 5ನೆ ಪರಾಮರ್ಶೆಯಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. ಭಯೋತ್ಪಾದನೆಯ ಕೃತ್ಯಗಳನ್ನು ಸಮರ್ಥಿಸಲು ಯಾವುದೇ ನಂಬಿಕೆ, ಸಮರ್ಥನೆ, ರಾಜಕೀಯ ಕಾರಣ ಅಥವಾ ವಾದವನ್ನು ಉಪಯೋಗಿಸುವಂತಿಲ್ಲವೆಂಬ ಭಾರತದ ದೃಢ ತೀರ್ಮಾನವನ್ನು ಅವರು ಧ್ವನಿಸಿದ್ದಾರೆ.
ಭಯೋತ್ಪಾದಕ ದಾಳಿಗಳ ಪಿತೂರಿಗಾರರು, ಭಯೋತ್ಪಾದನೆಯನ್ನು ಪ್ರಾಯೋಜಿಸುವ ಬೆಂಬಲಿಸುವ ಅಥವಾ ಯೋತ್ಪಾದಕರಿಗೆ ಹಾಗೂ ಭಯೋತ್ಪಾದನಾ ಗುಂಪುಗಳಿಗೆ ಸುರಕ್ಷಿತ ನೆಲೆಯನ್ನು ಒದಗಿಸುವ ದೇಶಗಳನ್ನು ಉತ್ತರದಾಯಿಗಳನ್ನಾಗಿಸಲೇಬೇಕು. ಯಾವುದೇ ದೇಶವೂ ಒಬ್ಬಂಟಿಯಾಗಿ ಭಯೋತ್ಪಾದನೆಯ ಸವಾಲನ್ನು ಪರಿಹರಿಸುವುದು ಅಸಾಧ್ಯವೆಂದು ಅಕ್ಬರುದ್ದೀನ್ ತಿಳಿಸಿದ್ದಾರೆ.
ಯಾವುದೇ ದೇಶವೂ ಭಯೋತ್ಪಾದನಾ ಪ್ರತಿರೋಧಿಯಾಗಿರುವುದು ಸಾಧ್ಯವಿಲ್ಲ. ಅಂತಹ ಹೀನ ದಾಳಿಗಳ ಸಂತ್ರಸ್ತರೂ ಸಹ ಕೇವಲ ಒಂದು ರಾಷ್ಟ್ರ ಅಥವಾ ಜನಾಂಗ ಅಥವಾ ಮತಕ್ಕೆ ಸೇರಿದವರಾಗಿಲ್ಲವೆಂದು ಅವರು ಹೇಳಿದ್ದಾರೆ. 193 ಸದಸ್ಯರ ಸಾಮಾನ್ಯ ಸಭೆಯು ಜಾಗತಿಕ ಭಯೋತ್ಪಾದನೆ ನಿಗ್ರಹ ಕಾರ್ಯವ್ಯೆಹದ ತನ್ನ 5ನೆಯ ಪರಾಮರ್ಶೆಯನ್ನು ಮುಂದುವರಿಸಿದೆ ಹಾಗೂ ಈ ಪಿಡುಗನ್ನು ಮೂಲೋತ್ಪಾಟನೆ ಮಾಡುವಕೆಲಸವನ್ನು ತ್ವರಿತವಾಗಿ, ಸಾಮೂಹಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವ ಪ್ರಯತ್ನವನ್ನು ದ್ವಿಗುಣಗೊಳಿಸುವ ಮಾರ್ಗಗಳ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿದೆ.







