ಜು.11ರಂದು ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕುರಿತು ಅವಲೋಕನ ಸಭೆ
ಕಾಸರಗೋಡು, ಜು.3: ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಯೋಜನೆ ಕುರಿತು ಚರ್ಚಿಸಲು ಜುಲೈ 11ರಂದು ತಿರುವನಂತಪುರದಲ್ಲಿ ಅವಲೋಕನ ಸಭೆ ನಡೆಯಲಿದೆ.
ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಂಸದ ಪಿ.ಕರುಣಾಕರನ್, ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯತ್ ಅಧ್ಯಕ್ಷ, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಪಾಲ್ಗೊಳ್ಳುವರು.
ಎಂಡೋಸಲ್ಫಾನ್ನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ, ರೋಗಪೀಡಿತರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಶಿಫಾರಸ್ಸು ಮಾಡಿದ ಸಹಾಯಧನ ವಿತರಣೆಗೆ ಬಾಕಿ ಇರುವ ಮೂರನೆ ಕಂತಿನ ಸಹಾಯಧನ ವಿತರಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಮುಳಿಯಾರಿನಲ್ಲಿ ಸ್ಥಳ ಗುರುತಿಸಿದರೂ ಇದುವರೆಗೆ ಪುನರ್ವಸತಿ ಗ್ರಾಮ ಯೋಜನೆ ಆರಂಭಿಸಲು ಸಾಧ್ಯವಾಗದೆ ಇರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಎಂಡೋಸಲ್ಫಾನ್ ಪೀಡಿತ ವಲಯದಲ್ಲಿ ಆಸ್ಪತ್ರೆ ಅಭಿವೃದ್ಧಿ ಸೇರಿದಂತೆ ಹಲವು ಸೌಲಭ್ಯಕ್ಕೆ ನಬಾರ್ಡ್ ಒದಗಿಸಿದ 200 ಕೋಟಿ ರೂ. ನಲ್ಲಿ 75 ಶೇ. ಹಣವನ್ನು ಬಳಕೆ ಮಾಡಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆ ಗೆ 12 ಕೋಟಿ ರೂ . ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಯೋಜನೆ ಕೂಡಾ ವಿಳಂಬಗೊಳ್ಳುತ್ತಿದೆ. ಬಡ್ಸ್ ಶಾಲಾ ಕಟ್ಟಡ ನಿರ್ಮಾಣ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.







