ಗಾಯಕ ಅಭಿಜಿತ್ ವಿರುದ್ಧ ಪತ್ರಕರ್ತೆಗೆ ಲೈಂಗಿಕ ಕಿರುಕುಳದ ಆರೋಪ

ಮುಂಬೈ,ಜು.3: ಪತ್ರಕರ್ತೆ ಮತ್ತು ಇತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಟ್ವಿಟರ್‌ನಲ್ಲಿ ಸಮರ ಸಾರಿ ಆಕೆಯನ್ನು ಅಸಭ್ಯವಾಗಿ ಟೀಕಿಸುವ ಮೂಲಕ ಬಾಲಿವುಡ್ ಗಾಯಕ ಅಭಿಜಿತ್ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಅಭಿಜಿತ್ ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ಟೆಕ್ಕಿ ಸ್ವಾತಿಯ ಹತ್ಯೆಯನ್ನು ‘ಲವ್ ಜಿಹಾದ್’ಎಂದು ಬಣ್ಣಿಸುವ ಮೂಲಕ ಹಂತಕ ಮುಸ್ಲಿಮ್ ಎಂದು ತಪ್ಪಾಗಿ ಬಿಂಬಿಸಿದ್ದು ವಿವಾದಕ್ಕೆ ನಾಂದಿ ಹಾಡಿತ್ತು.
ಅಭಿಜಿತ್ ಅನಗತ್ಯವಾಗಿ ಕೋಮು ಭಾವನೆಯನ್ನು ಪ್ರಚೋದಿಸಿದ್ದನ್ನು ಬೆಟ್ಟು ಮಾಡಿದ್ದ ಪತ್ರಕರ್ತೆ ಸ್ವಾತಿ ಚತುರ್ವೇದಿ ಮತ್ತು ಇತರ ಟ್ವಿಟರ್ ಬಳಕೆದಾರರು ಅವರ ಬಂಧನಕ್ಕೆ ಆಗ್ರಹಿಸಿದ್ದರು.ಇದರಿಂದ ಕೆರಳಿದ್ದ ಅಭಿಜಿತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಚತುರ್ವೇದಿಯನ್ನು ‘ಮುದುಕಿ’ಎಂದ ಕರೆದಿದ್ದರು.
ಮುಂಬೈ ಪೊಲೀಸರು ತನ್ನನ್ನು ಸಂಪರ್ಕಿಸಿ ಅಭಿಜಿತ್ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆಂದು ಟ್ವೀಟಿಸಿರುವ ಸ್ವಾತಿ ,ತಾನು ಅಭಿಜಿತ್ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ತನ್ನ ಹಿಂದುತ್ವ ಪರ ನಿಲುವಿಗಾಗಿ ಹೆಸರಾಗಿರುವ ಅಭಿಜಿತ್‌ಗೆ ಇಂತಹ ವಿವಾದಗಳು ಹೊಸದೇನಲ್ಲ. ಈ ಹಿಂದೆ ಪಾಕಿಸ್ತಾನಿ ಗಾಯಕರು ಮತ್ತು ಕಲಾವಿದರ ವಿರುದ್ಧ ಹಲವಾರು ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದರು. ಆದರೆ ಈ ಬಾರಿ ಸ್ವಾತಿ ಹತ್ಯೆ ಪ್ರಕರಣದಲ್ಲಿ ಅರಿವುಗೇಡಿಯಂತೆ ವರ್ತಿಸಿ ಕೋಮು ಭಾವನೆಯನ್ನು ಪ್ರಚೋದಿಸುವ ತಪ್ಪೆಸಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.







