ನಗರವಾಸಿಗಳ ಮೂಗರಳಿಸಿದ ಹಲಸಿನ ಹಬ್ಬ

ಮಂಗಳೂರು, ಜು.3: ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಇಂದು ನಗರದ ಶರವು ದೇವಸ್ಥಾನದ ಸಮೀಪವಿರುವ ಬಾಳಂಭಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಲಸು ಹಬ್ಬಕ್ಕೆ ಹಲಸಿನ ಹಣ್ಣನ್ನು ಕತ್ತರಿಸುವ ಮೂಲಕ ಯೆಯ್ಯೆಡಿಯ ಮೌಲ್ಯವರ್ಧಿತ ಉತ್ಪನ್ನಗಳ ಘಟಕ ಮೋಡರ್ನ್ ಕಿಚನ್ ಸಂಸ್ಥೆಯ ಮಾಲಕ ಅಣ್ಣಪ್ಪ ಪೈ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಳಿಕ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಹಲಸಿನ ಹಣ್ಣಿಗೂ ಮಾರುಕಟ್ಟೆ ಹೆಚ್ಚಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ಒದಗಿಸುವ ಕೆಲಸ ಆಗಬೇಕು. ರೈತರು ಬೆಳೆದ ಸಾವಯವ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತಾಗಬೇಕು ಎಂದರು.
ಹಲಸಿನ ಹಬ್ಬದ ಮೂಲಕ ಹಲಸಿನ ಹಣ್ಣಿನ ಮಾರುಕಟ್ಟೆ ವಿಸ್ತಾರವಾಗಿದೆ. ಹಲವು ತಳಿಯ ಹಲಸಿನ ಹಣ್ಣುಗಳನ್ನು ಒಂದೇ ಕಡೆ ಖರೀದಿಸುವ ಅವಕಾಶ ಗ್ರಾಹಕರಿಗೆ ಒದಗಿ ಬಂದಿದೆ. ಸಾವಯವ ಕೃಷಿಕ ಬಳಗ ಸಾವಯವ ರೈತರಿಗೆ ವಿಶೇಷ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾವಯವ ಕೃಷಿಕ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್, ಭಾರತದಲ್ಲಿ ಹಲಸಿನ ಹಣ್ಣಿನ ಬಗ್ಗೆ ಅಸಡ್ಡೆಯಿದೆ. ದೇಶದಲ್ಲಿ ಎರಡು ಸಾವಿರ ಕೋಟಿಯಷ್ಟು ಹಲಸು ಹಾಳಾಗುತ್ತಿದೆ. ಈ ಬಗ್ಗೆ ಜಾಗೃತಿ ಅಗತ್ಯವಿದೆ. ಫಿಲಿಫೈನ್ಸ್, ಮಲೇಶ್ಯಾ ಮುಂತಾದ ದೇಶಗಳಲ್ಲಿ ಹಲಸಿನ ಹಣ್ಣುಗಳ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಉತ್ತಮ ಮಾರುಕಟ್ಟೆಯೂ ಇದೆ ಎಂದರು.
ಜನತೆಯಲ್ಲಿ ಹಲಸಿನ ಹಣ್ಣಿನ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಾವಯವ ಉತ್ಪನ್ನದ ಜಾಗೃತಿಯನ್ನೂ ಸಾವಯವ ಕೃಷಿಕ ಬಳಗ ಮಾಡುತ್ತಿದೆ. ಮಂಗಳೂರು ನಗರದ 1 ಸಾವಿರ ಕುಟುಂಬಗಳಿಗೆ ಸಾವಯವ ಬೀಜಗಳನ್ನು ಹಂಚಿದ್ದೇವೆ. 28 ಸಾವಯವ ಸಂತೆ ಮಾಡಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನತೆ ಕೂಡ ಸಾವಯವದತ್ತ ಆಕರ್ಷಿತರಾಗಿದ್ದಾರೆ. ಈ ರೀತಿಯ ಬದಲಾವಣೆ ಅಗತ್ಯ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ವಿಷಯುಕ್ತ ಆಹಾರ ಪದಾರ್ಥಗಳಿಂದ ದೂರವಿದ್ದು, ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಕೃಷ್ಣರಾವ್ ಹೇಳಿದರು.
ನಗರದಲ್ಲಿಯೆ ಪ್ರಪ್ರಥಮ ಬಾರಿಗೆ ನಡೆದ ಹಲಸು ಹಬ್ಬದಲ್ಲಿ ಸುಮಾರು ಐದು ಸಾವಿರ ಮಂದಿ ಪಾಲ್ಗೊಂಡರು.
ಸಭಾಂಗಣದಲ್ಲಿ ಹಲಸಿನ ಹಣ್ಣು, ಬಾಯಲ್ಲಿ ನೀರೂರಿಸುವ ಹಲಸಿನ ಖಾದ್ಯಗಳ ಘಮ ಘಮವೇ ತುಂಬಿಹೋಗಿತ್ತು. ರುದ್ರಾಕ್ಷಿ ಹಲಸು, ಚಂದ್ರ ಹಲಸು ಸೇರಿದಂತೆ ವಿವಿಧ ತಳಿಯ ಹಲಸಿನ ಹಣ್ಣುಗಳು, ಹಲಸಿನ ಹಣ್ಣಿನ ಪಾಯಸ, ಹಲಸಿನ ಕಾಯಿ ಮಂಚೂರಿ, ಶೀರ, ಗಾರಿಕೆ, ಹಲ್ವ, ಹಲಸಿನ ಕಾಯಿ ಉರುವಲ್, ಹಲಸಿನ ಗಟ್ಟಿ ಹೀಗೆ ಹಲಸಿನ ಹಣ್ಣಿನಿಂದ ತಯಾರಾದ ವಿವಿಧ ಬಗೆಯ ಖಾದ್ಯಗಳು ಗ್ರಾಹಕರಿಗಾಗಿ ಕಾದಿದ್ದವು. ಹಲಸು ಪ್ರದರ್ಶನ ವೀಕ್ಷಿಸಲು ಬಂದ ಗ್ರಾಹಕರು ಹಲಸಿನಿಂದ ತಯಾರಿಸಿದ ಖಾದ್ಯಗಳನ್ನು ಖರೀದಿಸಿದರು.
ಸುಮಾರು 20 ಮಳಿಗೆಗಳಲ್ಲಿ ವಿವಿಧ ತಳಿಗಳ ಹಲಸು ಮಾರಾಟ, ಹಲಸು ಖಾದ್ಯಗಳ ತಯಾರಿ, ಹಲಸು ವೌಲ್ಯವರ್ಧನೆ ಪ್ರಾತ್ಯಕ್ಷಿಕೆ , ವಿವಿಧ ಹೂ, ಹಣ್ಣುಗಳ ಮತ್ತು ಗಿಡಗಳ ಮಾರಾಟ, ವಿವಿಧ ಗಿಡ ಕಟ್ಗಟುವ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.
ಗಮಸೆಳೆದ ಹಲಸಿನ ಬೀಜದ ಕಾಫಿ ಹುಡಿ
ನಗರದ ಪಾಂಡೇಶ್ವರದ ಮೈತ್ರೇಯಿ ಶೆಣೈ ಅವರು ಉತ್ಪಾದಿಸಿದ ಹಲಸಿನ ಬೀಜದಿಂದ ತಯಾರಿಸಿದ ಕಾಫಿ ಹುಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹಲಸು ಹಬ್ಬಕ್ಕೆ ಹಲಸಿನ ಬೀಜದಿಂದ ಕಾಫಿ ಹುಡಿಯನ್ನು ತಯಾರಿಸಲು ಮೈತ್ರೇಯಿ ಶೆಣೈ ನಿರ್ಧರಿಸಿ ಸುಮಾರು 2 ತಿಂಗಳು ಶ್ರಮವಹಿಸಿ ಕಾಫಿ ಹುಡಿಯನ್ನು ತಯಾರಿಸಿದ್ದಾರೆ. ಇಂದು ನಡೆದ ಹಲಸು ಮೇಳದಲ್ಲಿ ಇದನ್ನು ಬಿಡುಗಡೆಗೊಳಿಸಲಾಯಿತು.
ಹಲಸಿನ ಬೀಜದಿಂದ ತಯಾರಿಸಿದ ಕಾಫಿ ಬೀಜವನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು.







