ಉ.ಪ್ರ.ಚುನಾವಣೆಯಲ್ಲಿ ಪ್ರಿಯಾಂಕಾ ಮುಖ್ಯ ಪ್ರಚಾರಕಿ:ಕಾಂಗ್ರೆಸ್ ನಿರ್ಧಾರ

ಹೊಸದಿಲ್ಲಿ,ಜು.3: 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರ ಪುತ್ರಿ ಪ್ರಿಯಾಂಕಾ ಗಾಂಧಿಯವರನ್ನು ತನ್ನ ಪ್ರಚಾರ ಅಭಿಯಾನದ ನಾಯಕಿಯಾಗಿ ಬಿಂಬಿಸಲು ಕಾಂಗ್ರೆಸ್ ಕೊನೆಗೂ ನಿರ್ಧರಿಸಿದೆ.
ಪ್ರಿಯಾಂಕಾ ಅವರು ಈ ಬಾರಿ ರಾಯ್‌ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಿಂದ ಹೊರಬಂದು ರಾಜ್ಯಾದ್ಯಂತ 150 ಚುನಾವಣಾ ಪ್ರಚಾರಸಭೆಗಳನ್ನು ನಡೆಸಲಿದ್ದಾರೆ ಎಂದು ಉ.ಪ್ರದೇಶದಲ್ಲಿ ಕಾಂಗ್ರೆಸ್ ವಕ್ತಾರರಾಗಿರುವ ಸತ್ಯದೇವ ತ್ರಿಪಾಠಿ ಅವರು ಹೇಳಿರುವುದಾಗಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಪ್ರಿಯಾಂಕಾ ಹಿಂದಿನ ಚುನಾವಣೆಗಳಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರಕ್ಕಿಳಿದಿದ್ದರು.
ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿಯವರು ವಿದೇಶದಿಂದ ಭಾರತಕ್ಕೆ ವಾಪಸಾದ ಬಳಿಕ ಜುಲೈ ಮಧ್ಯಭಾಗದಲ್ಲಿ ಲಕ್ನೋದಲ್ಲಿ ಸಮಾವೇಶವೊಂದನ್ನು ಹಮ್ಮಿಕೊಳ್ಳಲು ಸಹ ಕಾಂಗ್ರೆಸ್ ಯೋಜಿಸುತ್ತಿದೆ. ಈ ಸಮಾವೇಶದಲ್ಲಿ ರಾಹುಲ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಜೊತೆಗೆ ಪ್ರಿಯಾಂಕಾರನ್ನು ಪ್ರಚಾರ ಮುಖ್ಯಸ್ಥೆಯಾಗಿ ಘೋಷಿಸಲಿದ್ದಾರೆ.
ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಝಾದ್ ಅವರು ಪ್ರಿಯಾಂಕಾರನ್ನು ಭೇಟಿಯಾಗಿ ಮುಖ್ಯ ಪ್ರಚಾರಕಿಯಾಗಿ ಹೊಣೆ ಹೊತ್ತುಕೊಳ್ಳುವಂತೆ ಅವರಿಗೆ ವಿಧ್ಯುಕ್ತ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.
ಕಳೆದ ಮೇ ತಿಂಗಳಿನಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರೂ ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು.
ಪಕ್ಷದ ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ್ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಿಯಾಂಕಾರಿಗೆ ಪ್ರಮುಖ ಪಾತ್ರವನ್ನು ಶಿಫಾರಸು ಮಾಡಿದ್ದರು.





