ವೈಜ್ಞಾನಿಕವಾಗಿಯೂ ಉಪವಾಸ ಆರೋಗ್ಯಕ್ಕೆ ಉತ್ತಮ: ಖಲಂದರ್ ರಝ್ವಿ

ಪಡುಬಿದ್ರೆ, ಜು.3: ಉಪವಾಸವು ವೈಜ್ಞಾನಿಕವಾಗಿ, ಆರೋಗ್ಯ ಸುಧಾರಣೆ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲ್ಪಟ್ಟಿದ್ದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮುಸ್ಲಿಮೇತರರೂ ಉಪವಾಸವನ್ನಾಚರಿಸುತ್ತಾರೆ ಎಂದು ಲೇಖಕ ಹಾಗೂ ಪ್ರವಚನಕಾರ ಎಂ.ಎಚ್.ಎಂ.ಖಲಂದರ್ ರಝ್ವಿ ಬೆಜ್ಜವಳ್ಳಿ ಹೇಳಿದರು.
ಪಡುಬಿದ್ರೆಯಲ್ಲಿ ಪಡುಬಿದ್ರೆ ರೋಟರಿ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತಾಡುತ್ತಿದ್ದ ಅವರು, ಮುಸ್ಲಿಮರ ಪವಿತ್ರ ರಮಝಾನ್‌ನಲ್ಲಿ ನಡೆಸುವ ಉಪವಾಸವು ಬಡವರ ಹಸಿವಿನ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಈ ಮೂಲಕ ಆರ್ಥಿಕವಾಗಿ ಬಡವರಿಗೆ ತನ್ನ ವ್ಯಾಪಾರದ ಲಾಭಾಂಶದಲ್ಲಿ ದಾನಧರ್ಮ ನೀಡಬೇಕಾಗುತ್ತದೆ ಎಂದರು.
ಯಾವುದೇ ಧರ್ಮಗಳು ಅಸಹಿಷ್ಣುತೆಯೊಂದಿಗೆ ಕೋಮು ಭಾವನೆಗಳನ್ನು ಪ್ರಚೋದಿಸುವಂತೆ ಬೋಧನೆಗಳನ್ನು ಮಾಡುವುದಿಲ್ಲ. ಇಂತಹ ಸೌಹಾರ್ದ ಕಾರ್ಯಕ್ರಮಗಳನ್ನು ಅಲ್ಲಲ್ಲಿ ಆಯೋಜಿಸುವ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯೊಂದಿಗೆ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪಡುಬಿದ್ರೆ ಠಾಣಾ ಪಿಎಸೈ ಅಜ್ಮತ್ ಅಲಿ, ಶಾಂತಿ-ಸೌಹಾರ್ದತೆಯನ್ನು ಬೋಧಿಸುವ ರಮಝಾನ್ ಆಂತರಿಕವಾಗಿ ಮಾನವರನ್ನು ಶುದ್ಧ ಮನಸ್ಕರಾಗಲು ಪ್ರೇರೇಪಿಸುವುದಾಗಿ ಹೇಳಿದರು.
ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ಹೇಮಚಂದ್ರ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಪಡುಬಿದ್ರೆ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ ಪಡುಬಿದ್ರೆ, ಪಡುಬಿದ್ರೆ ರೋಟರಿ ಸ್ಥಾಪಕಾಧ್ಯಕ್ಷ ವೈ. ಸುಧೀರ್ ಕುಮಾರ್, ರೋಟರಿ ಕಾರ್ಯದರ್ಶಿ ಲಕ್ಷಣ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಡುಬಿದ್ರೆ ರೋಟರಿ ನಿಯೋಜಿತ ಕಾರ್ಯದರ್ಶಿ ಕರುಣಾಕರ ನಾಯಕ್ ಸ್ವಾಗತಿಸಿದರು. ನಿಯೋಜಿತ ಅಧ್ಯಕ್ಷ, ಅಬ್ದುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







