ಶಾಸಕ ಸ್ಥಾನಕ್ಕೆ ರಾಜೀನಾಮೆ: ನಿರ್ಧಾರದಿಂದ ಹಿಂದೆ ಸರಿಯಲ್ಲ: ಅಂಬರೀಶ್ ಸ್ಪಷ್ಟನೆ

ಬೆಂಗಳೂರು, ಜು. 3: ಸಂಪುಟ ಪುನಾಚರನೆ ಹಿನ್ನೆಲೆಯಲ್ಲಿ ಸ್ಥಾನ ಕಳೆದುಕೊಂಡ ಹಿರಿಯ ಶಾಸಕ ಅಂಬರೀಶ್, ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳುವ ಮೂಲಕ ಪಕ್ಷದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ರವಿವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಅಂಬರೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದು, ಪಕ್ಷ ತೊರೆಯದಂತೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಂತೆ ಮನವಿ ಮಾಡಿದ್ದಾರೆ. ಆದರೆ, ಅಂಬಿ ಇದಕ್ಕೆ ಸ್ಪಂದಿಸಿಲ್ಲ ಎಂದು ಹೇಳಲಾಗಿದೆ.
‘ಈಗಾಗಲೇ ತಾನು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಅಂಗೀರಿಸಲು ಸಾಧ್ಯವಿಲ್ಲ ಎಂದರೆ ಜು.4ರಂದು ತಾನೇ ಸ್ಪೀಕರ್ ಶಿವಶಂಕರ ರೆಡ್ಡಿ ಅವರನ್ನು ಖುದ್ದು ಭೇಟಿ ಮಾಡಿ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೇನೆ’ ಎಂದು ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಹರಿಪ್ರಸಾದ್ ಸಮಾಲೋಚನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹೊಸದಿಲ್ಲಿಗೆ ಪಕ್ಷದ ವರಿಷ್ಠರೊಂದಿಗೆ ನಾನು ಚರ್ಚಿಸುತ್ತೇನೆ. ಅಲ್ಲದೆ, ಕ್ಷೇತ್ರದ ಜನತೆ ನನ್ನನ್ನು ಈ ಹಂತಕ್ಕೆ ಬೆಳೆಸಿದ್ದು, ಅವರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ-ಸೂಚನೆಯಂತೆ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುತ್ತೇನೆ ಎಂದರು.
ನಾನು ಸ್ವಾಭಿಮಾನವಿರುವ ವ್ಯಕ್ತಿ. ಕನಿಷ್ಟ ಪಕ್ಷ ಸಂಪುಟದಿಂದ ಕೈಬಿಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರೆ, ನಾನೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ಆದರೆ, ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಅಂಬಿ ವಾಗ್ದಾಳಿ ನಡೆಸಿದರು.







