ಹಾಸನ: ತೆಂಗಿನಕಾಯಿ ಖರೀದಿ ಕೇಂದ್ರಕ್ಕೆ ಚಾಲನೆ
.jpg)
ಹಾಸನ, ಜು.3: ಸುಲಿದ ತೆಂಗಿನಕಾಯಿಯನ್ನು ರೈತರಿಂದ ನೇರವಾಗಿ ಖರೀದಿಸಲು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಾಪಿಸಲಾಗಿರುವ ತೆಂಗಿನಕಾಯಿ ಖರೀದಿ ಕೇಂದ್ರಕ್ಕೆ ರವಿವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ಎಪಿಎಂಸಿ ಕಾರ್ಯದರ್ಶಿ ಲಕ್ಷ್ಮೇಗೌಡ ಮಾತನಾಡಿ, ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು. ರೈತರಿಗೆ ಅನುಕೂಲದ ದೃಷ್ಟಿಯಲ್ಲಿ ಜಿಲ್ಲೆಯಲ್ಲಿ ಮೂರು ಖರೀದಿ ಕೇಂದ್ರಗಳಿದ್ದು, ಹಾಸನ ವಿಭಾಗದಲ್ಲಿ ಹಾಸನ, ಆಲೂರು, ಸಕಲೇಶಪುರ, ಅರಕಲಗೂಡು ಹಾಗೂ ಬೇಲೂರು ವ್ಯಾಪ್ತಿಯ ರೈತರಿಂದ ಎಫ್‌ಎಕ್ಯೂ ಗುಣಮಟ್ಟದ ತೆಂಗಿನ ಕಾಯಿಗಳನ್ನು ಕ್ವಿಂಟಾಲ್‌ಗೆ 1,600 ರೂ.ಗೆ ಖರೀದಿಸಲಾಗುವುದು ಎಂದು ಹೇಳಿದರು.
ಅರಸೀಕೆರೆ ತಾಲೂಕಿನ ಗಂಡಸಿ, ಚನ್ನರಾಯಪಟ್ಟಣದಲ್ಲಿ ಕೂಡ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು. ಈಗಾಗಲೇ ಸರಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ. ಖರೀದಿ ಮಾಡಿದ ಎರಡು ದಿನಗಳಲ್ಲಿ ರೈತರ ಖಾತೆಗೆ ಹಣ ಪಾವತಿಸುವುದಾಗಿ ಹೇಳಿದರು. ಖರೀದಿ ಕೇಂದ್ರಗಳಲ್ಲಿ ವಾರದ ಎಲ್ಲಾ ಕೆಲಸದ ದಿನಗಳಲ್ಲಿ, ಸಂತೆ ದಿನಗಳನ್ನು ಹೊರತುಪಡಿಸಿ ಖರೀದಿಸುವುದು. ರೈತರು ಪಹಣಿ ಹಾಗೂ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಪ್ರತಿಯೊಂದಿಗೆ ಗುರುತಿನ ಚೀಟಿಯನ್ನು ಪಡೆದು ಖರೀದಿ ಕೇಂದ್ರಗಳಲ್ಲಿ ಹೆಸರನ್ನು ನೋಂದಾಯಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಂಗಶೆಟ್ಟಿ ಮಾತನಾಡಿ, ತೆಂಗಿನ ಬೆಲೆ ಕುಸಿದಿರುವುದರಿಂದ ಬೆಂಬಲ ಬೆಲೆ ನೀಡಿ ಖರೀದಿ ಮಾಡುವಂತೆ ಸರಕಾರ ಸೂಚಿಸಿದಂತೆ ಖರೀದಿ ಮಾಡಲು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಸಲಹೆ ನೀಡಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ವ್ಯವಸ್ಥಾಪಕ ರಂಗಸ್ವಾಮಿ, ತಂಬ್ಲಾಪುರ ಕೃಷ್ಣೇಗೌಡ, ಜಿಪಂನ ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರ್, ಲೋಕೇಶ್ ಇತರರು ಉಪಸ್ಥಿತರಿದ್ದರು.







