ವಿದ್ಯಾರ್ಥಿ ಜೀವನವನ್ನು ಸವಾಲಾಗಿ ಸ್ವೀಕರಿಸಿ: ಶರತ್ ಸೋಮಣ್ಣ
ಪದಗ್ರಹಣ ಸಮಾರಂಭ

ಮಡಿಕೇರಿ, ಜು.3: ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಲೂ ಓಕ್ ಕನ್‌ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್‌ನ ಸ್ಥಾಪಕಾಧ್ಯಕ್ಷ ಶರತ್ ಸೋಮಣ್ಣ, ವಿದ್ಯಾರ್ಥಿ ಜೀವನವನ್ನು ಸವಾಲಾಗಿ ಸ್ವೀಕರಿಸುವಂತೆ ಕರೆ ನೀಡಿದರು. ನಿತ್ಯ ಬದುಕಿನಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ಧೈರ್ಯ ಹಾಗೂ ಛಲದಿಂದ ಎದುರಿಸಿ ಮುನ್ನುಗ್ಗಲು ಪ್ರಯತ್ನಿಸಿದರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು.
ಪ್ರತಿಯೊಬ್ಬರೂ ಬದುಕಿನಲ್ಲಿ ತಮ್ಮದೇ ಆದ ಗುರಿಯನ್ನು ಹೊಂದುವ ಮೂಲಕ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ್ಗಿಂದಾಗೆ ಬದಲಾವಣೆಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲ ವ್ಯವಸ್ಥೆಗಳಿಗೂ ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಶರತ್ ಸೋಮಣ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆತ್ಮ ವಿಶ್ವಾಸದ ನಡೆಯಿಂದ ಮಾತ್ರ ಯಶಸ್ಸಿನ ದಿಕ್ಕಿನತ್ತ ಸಾಗಲು ಸಾಧ್ಯವೆಂದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಯ ಯಶಸ್ಸಿನ ಹಿಂದೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ ಎಂದು ಶ್ಲಾಘಿಸಿದರು. ಕಠಿಣ ಪರಿಶ್ರಮವಿದ್ದರೆ ಎಲ್ಲವನ್ನೂ ಸಾಧಿಸಬಹುದಾಗಿದೆ, ಆದ್ದರಿಂದ ವಿದ್ಯಾರ್ಥಿಗಳು ಶ್ರಮ ಪಡುವುದು ಅಗತ್ಯವೆಂದು ಕರೆ ನೀಡಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಜಸ್ವಂತ್ ಸಿ.ವಿ, ಹೇಮಾಶ್ರೀ ಕೆ.ಪಿ, ರಾಜೇಶ್ ಸುಬ್ರಮಣಿ ಬಿ.ಪಿ, ಚೋಂದಮ್ಮ ಪಿ.ಡಿ, ಕಾರ್ತಿಕ್ ಅಪ್ಪಣ್ಣ ಕೆ.ಎಂ., ಅಮೂಲ್ಯ ಕೆ.ಬಿ., ಗುರುಗೋವಿಂದ ಎಚ್.ಯು., ಹೇಮಂತ್ ಪಿ.ಬಿ., ಯಶಸ್ವಿನಿ ಕೆ.ಪಿ., ಜಸ್ವಂತ್ ಟಿ.ಆರ್., ಮನಾಲಿ ಎ.ಬಿ., ಗಾನವಿ ಬಿ.ಎಂ. ಆಯ್ಕೆಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲೆ ಬಿ.ಎಂ.ಸರಸ್ವತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭ ಕೊಡವ ಸಮಾಜದ ಕಾರ್ಯದರ್ಶಿ ಶಾಂತೆಯಂಡ ಸನ್ನಿ ಪೂವಯ್ಯ ವಿಜ್ಞಾನ ಕ್ಲಬ್, ಕುಡುವಂಡ ಉತ್ತಪ್ಪ ಫೈನ್ ಆರ್ಟ್ ಕ್ಲಬ್ ಹಾಗೂ ಮಣವಟ್ಟಿರ ಚಿಣ್ಣಪ್ಪಕ್ವಿಝ್ ಕ್ಲಬ್ ಉದ್ಘಾಟಿಸಿದರು.
ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಾಧಕರಿಗೆ ಪ್ರೋತ್ಸಾಹ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ರತನ್ ಕುಟ್ಟಯ್ಯ, ಶಾಲೆಯ ಕರೆಸ್ಪಾಂಡೆಂಟ್ ಚಿಣ್ಣಪ್ಪ, ಆಡಳಿತಾಧಿಕಾರಿ ಪೊನ್ನಮ್ಮ ಉಪಸ್ಥಿತರಿದ್ದರು.







