ಮನಸ್ಸನ್ನು ಅರಳಿಸುವ ಶಕ್ತಿ ಛಾಯಾಚಿತ್ರ ಕಲೆಗಿದೆ: ವಿಲಿಯಂ
ರಾಷ್ಟ್ರ, ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನ
.jpg)
ಸಾಗರ,ಜು.3: ಛಾಯಾಚಿತ್ರಗಳು ಉತ್ತಮ ಕಥೆ, ಕವನ, ಗದ್ಯ, ಗಾಯನ ಹಾಗೂ ವಿಮರ್ಶೆಯನ್ನು ನೆನಪಿಸುತ್ತವೆೆ. ಛಾಯಾಚಿತ್ರಗಾರರ ಕಲ್ಪನೆಯ ಕಣ್ಣು ನಿಜಕ್ಕೂ ಅಚ್ಚರಿ ತರುವಂತಹದ್ದು ಎಂದು ಲೇಖಕ ವಿಲಿಯಂ ಹೇಳಿದ್ದಾರೆ. ಇಲ್ಲಿನ ರೋಟರಿ ಭವನದಲ್ಲಿ ರವಿವಾರ ಸಾಗರ ಫೋಟೋಗ್ರಾಫಿಕ್ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 15ನೆ ವರ್ಷದ ರಾಷ್ಟ್ರ ಮತ್ತು ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನದಲ್ಲಿ ಬಹುಮಾನ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ಬದುಕಿನ ದೈನಂದಿನ ಜಂಜಾಟದ ನಡುವೆ ಸಾಹಿತ್ಯ, ಕಲೆ, ಛಾಯಾಗ್ರಹಣ ಮುಂತಾದವು ಸ್ವಲ್ಪ ಸಮಾಧಾನ ನೀಡುತ್ತವೆೆ. ಮನಸ್ಸನ್ನು ಅರಳಿಸುವ ಶಕ್ತಿ ಛಾಯಾಚಿತ್ರ ಕಲೆಗಿದೆೆ ಎಂದರು. ಛಾಯಾಚಿತ್ರಗಾರ ತನ್ನ ಕಣ್ಣಳತೆಯಲ್ಲಿ ತೆಗೆದ ಛಾಯಾಚಿತ್ರ ನೋಡುಗರರಿಗೆ ಒಂದೊಂದು ಕಲ್ಪನಾಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಛಾಯಾಚಿತ್ರವನ್ನು ಸೆರೆ ಹಿಡಿಯುವಾಗ ಏಕಾಗ್ರತೆ ಅಗತ್ಯ. ಇಂತಹ ಏಕಾಗ್ರತೆ ಹಾಗೂ ಕಲಾತ್ಮಕ ಮನೋಭಾವ ಉತ್ತಮ ಛಾಯಾಚಿತ್ರ ಸೆರೆಹಿಡಿಯಲು ಸಹಕಾರಿಯಾಗುತ್ತದೆ. ಇಂತಹ ಸ್ಪರ್ಧೆಗಳು ಛಾಯಾಚಿತ್ರಗಾರನ ಕೌಶಲ್ಯವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಮಾಜಿ ಅಧ್ಯಕ್ಷ ವೆಂಕಟೇಶ್, ಭಾಷೆ, ಗಡಿ, ಜಾತಿಪಂಥವನ್ನು ಮೀರಿ ಛಾಯಾಚಿತ್ರ ಕ್ಷೇತ್ರ ಬೆಳೆದಿದೆ. ಉತ್ತಮ ಛಾಯಾಚಿತ್ರಗಾರ ಸದಾ ಹೊಸದನ್ನು ಹುಡುಕುತ್ತಾ ಇರುತ್ತಾನೆ. ಇಂತಹ ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ ಛಾಯಾಚಿತ್ರಗಾರರು ಪಾಲ್ಗೊಳ್ಳುವುದರಿಂದ ದೃಶ್ಯ ಸೆರೆ ಹಿಡಿಯುವ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಾಗರ ಫೋಟೋಗ್ರಾಫಿಕ್ ಸೊಸೈಟಿ ಅಧ್ಯಕ್ಷೆ ಪಾರ್ವತಿ ಆರ್. ದೊಡ್ಡೇರಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ ಎ.ಜಿ.ಲಕ್ಷ್ಮೀನಾರಾಯಣ, ಆರ್.ಸತೀಶ್, ಉಲ್ಲಾಸ ಶ್ಯಾನಭಾಗ್ ಮತ್ತಿತರರು ಉಪಸ್ಥಿತರಿದ್ದರು.







