ಸಮುದ್ರ ಮೀನು ಮಾರಾಟ ಹಕ್ಕು ವಿಚಾರದಲ್ಲಿ ಇಒ ಹಸ್ತಕ್ಷೇಪ
ಗ್ರಾಪಂ ಸದಸ್ಯರ ಆಕ್ಷೇಪ

ಸಿದ್ದಾಪುರ,ಜು.3: ಸ್ಥಳೀಯ ಗ್ರಾಪಂ ಸಾಮಾನ್ಯ ಸಭೆಯು ಗ್ರಾಪಂ ಅಧ್ಯಕ್ಷ ಎಂ.ಕೆ ಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮುದ್ರ ಮೀನು ಮಾರಾಟದ ಹಕ್ಕಿನ ವಿಚಾರದಲ್ಲಿ ವೀರಾಜಪೇಟೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಾನೂನು ವಿರುದ್ಧ ಆದೇಶ ಹೊರಡಿಸಿರುವುದರ ವಿರುದ್ಧ ಸರ್ವ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆದೇಶದಂತೆ ಸಮುದ್ರ ಮೀನು ಮಾರಾಟದ ಹಕ್ಕು ಹರಾಜು ಮಾಡಲಾಗಿದ್ದು, ನಾಪೋಕ್ಲು ನಿವಾಸಿ ಇಸ್ಮಾಯೀಲ್ ಅವರಿಗೆ ಪರವಾನಿಗೆ ನೀಡ ಬೇಕೆಂದು ಮರು ಆದೇಶ ಹೊರಡಿಸಿರುವುದರ ಹಿಂದೆ ಹಣದ ಆಮಿಷವಿರುವುದಾಗಿ ಸದಸ್ಯ ಜಾಫರ್, ಶೌಕತ್ ಆಲಿ, ಹುಸೈನ್ ಸೇರಿದಂತೆ ಕೆಲವು ಸದಸ್ಯರು ಆರೋಪಿಸಿದ್ದಾರೆ.
ಇಒ ಅವರ ಕಾನೂನು ಬಾಹಿರ ಆದೇಶದ ಹಿಂದೆ, ಇದೇ ಗ್ರಾಪಂನಿಂದ ಎತ್ತಂಗಡಿ ಮಾಡಲಾದ ಪಿಡಿಒ ತಿಮ್ಮಯ್ಯ ಅವರ ಕೈವಾಡವಿದೆ ಎಂದು ಸದಸ್ಯ ಟಿ.ಎಚ್. ಮಂಜುನಾಥ್ ಆರೋಪಿಸಿದರು. ಜನಪ್ರತಿನಿಧಿಗಳಿಗೆ ಅಗೌರವ ತೋರಿದ ಕಾರಣಕ್ಕೆ ಇಲ್ಲಿಂದ ವರ್ಗಾವಣೆಗೊಂಡ ತಿಮ್ಮಯ್ಯ ಮತ್ತೆ ಗ್ರಾಪಂ ಕಚೇರಿಯಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ ಎಂದರು. ಮೀನು ಮಾರಾಟದ ಹಕ್ಕಿನ ವಿಚಾರದಲ್ಲಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಅನುಮೋದನೆ ಪಡೆದು ಮಾಡಿದ ಪ್ರಕ್ರಿಯೆ ವಿರುದ್ಧ ಆದೇಶ ಹೊರಡಿಸಿರುವ ಕಾರ್ಯನಿರ್ವಹಣಾಧಿಕಾರಿ ಗ್ರಾಮದ ಆಡಳಿತ ವಿಚಾರದಲ್ಲಿ ಮೂಗು ತೂರಿಸುತ್ತಿರುವುದು ಸರಿಯಿಲ್ಲ. ಸದಸ್ಯರ ತೀರ್ಮಾನಕ್ಕೆ ಬೆಲೆ ಇಲ್ಲವೇ ಎಂದು ಶಿವಕುಮಾರ್ ಪ್ರಶ್ನಿಸಿದರು. ಪ್ರತೀ ವಿಚಾರದಲ್ಲೂ ಇಒ ಕಾನೂನು ಮೀರಿ ವರ್ತಿಸುವುದಾದರೆ ನಾವು ಜನಪ್ರತಿನಿಧಿಗಳು ನಮ್ಮ ಅಧಿಕಾರವನ್ನು ಇಒ ಅವರಿಗೆ ಬರವಣಿಗೆ ಮೂಲಕ ನೀಡಿ ನಾವು ಮನೆಯಲ್ಲಿ ಕೂರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷದಂತೆ ಸಮುದ್ರ ಮೀನು ಮಾರಾಟದ ಹಕ್ಕಿನಲ್ಲಿ ಪಂಚಾಯತ್‌ಗೆ ಈ ಹಿಂದಿನ ವ್ಯಾಪಾರಿಗಳಿಂದ ಕಡಿಮೆ ಆದಾಯ ಬರುತಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ನಡೆದ ಹರಾಜಿನಲ್ಲಿ ಗ್ರಾಪಂ ಗೆ 5ಲಕ್ಷ ರೂ.ಹೆಚ್ಚುವರಿ ಆದಾಯ ದೊರೆತಿದೆ. ಆದರೆ ಈ ಹಿಂದಿನ ಹಕ್ಕುದಾರರು ನೂತನ ಹಕ್ಕುದಾರರ ನೈರ್ಮಲ್ಯದ ನೆಪವೊಡ್ಡಿ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕೆಲವು ಸದಸ್ಯರು ಸಭೆಯಲ್ಲಿ ತಿಳಿಸಿದರು.
ವಿವಿಧ ಅನುದಾನದಡಿ ಹಲವು ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಲಾಯಿತು. ಸ್ವಚ್ಛತೆ ಮತ್ತು ಕುಡಿಯುವ ನೀರಿನ ವಿಚಾರವಾಗಿ ಗಂಭೀರ ಚರ್ಚೆ ಮಾಡಲಾಯಿತು. ಗ್ರಾಮದಲ್ಲಿ ಕಸದ ಸಮಸ್ಯೆ ಮಿತಿ ಮೀರಿದ್ದು, ಪ್ಲಾಸ್ಟಿಕ್ ನಿಷೇಧಿಸ ಬೇಕೆಂದು ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಿಸಿದರು. ಗ್ರಾಮದಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧವಿದೆ ಎಂಬ ಆದೇಶ ಮಾಡಲಾಗಿದ್ದು, ಯಾರೂ ಕೂಡಾ ಆದೇಶ ಪಾಲಿಸುತ್ತಿಲ್ಲ ಎಂದು ಪಿಡಿಒ ಮಾಹಿತಿ ನೀಡಿದರು. ಈ ಸಂದರ್ಭ ಪಿಡಿಒ ವಿಶ್ವನಾಥ್, ಉಪಾಧ್ಯಕ್ಷೆ ರಾಜೇಶ್ವರಿ, ಸರ್ವ ಸದಸ್ಯರು ಮತ್ತು ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.ಇದ್ದರು.







