ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದವರನ್ನು ಪತ್ತೆ ಹಚ್ಚುವೆವು: ಶೇಖ್ ಹಸೀನಾ

ಢಾಕಾ,ಜು.2: ಇಲ್ಲಿನ ಕೆಫೆಯೊಂದರಲ್ಲಿ ಶುಕ್ರವಾರ ಸಂಜೆ ಭೀಕರ ದಾಳಿ ನಡೆಸಿ 20 ಮಂದಿಯನ್ನು ಹತ್ಯೆಗೈದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಹಾಗೂ ಸ್ಫೋಟಕಗಳನ್ನು ಪೂರೈಕೆ ಮಾಡಿದ ಪಾತಕಿಗಳ ‘‘ಬೇರುಗಳನ್ನು’’ ಜಾಲಾಡುವುದಾಗಿ ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ರವಿವಾರ ಪ್ರತಿಜ್ಞೆಗೈದಿದ್ದಾರೆ.
ಅವರು ಢಾಕಾದಲ್ಲಿರುವ ತನ್ನ ಅಧಿಕೃತ ನಿವಾಸ ‘ಗಣಬಹಬನ್’ನಲ್ಲಿ ಜಪಾನ್‌ನ ವಿದೇಶಾಂಗ ಸಚಿವ ಸೆಜಿ ಕಿಹಾರಾ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ಢಾಕಾ ಹತ್ಯಾಕಾಂಡ ರೂವಾರಿಗಳನ್ನು ಶೀಘ್ರವೇ ಪತ್ತೆ ಹಚ್ಚುವ ಭರವಸೆ ನೀಡಿದರು.
ಢಾಕಾದ ಬಿಗಿಭದ್ರತೆಯ ರಾಜತಾಂತ್ರಿಕ ವಲಯದಲ್ಲಿರುವ ಹೊಲ್ ಆರ್ಟಿಸನಂ ಬೇಕರಿಯ ಮೇಲೆ ಶುಕ್ರವಾರ ಸಂಜೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಏಳು ಮಂದಿ ಜಪಾನೀಯರು ಸೇರಿದಂತೆ 20 ಮಂದಿ ಮೃತಪಟ್ಟಿದ್ದರು. ಹತ್ಯೆಯಾದ ಜಪಾನೀಯರ ಪೈಕಿ ಆರು ಮಂದಿ ಢಾಕಾದ ಮೆಟ್ರೊರೈಲು ಯೋಜನೆಯ ಸಮೀಕ್ಷಕರಾಗಿದ್ದರು.
ದಾಳಿ ಘಟನೆಯ ಬೆನ್ನಲ್ಲೇ ಜಪಾನ್ ಸರಕಾರವು ತನ್ನ ವಿದೇಶಾಂಗ ಸಚಿವ ಕಿಹಾರಾರನ್ನು ಢಾಕಾಗೆ ಕಳುಹಿಸಿತ್ತು.





