ಕಿಡ್ನಿ ವೈಫಲ್ಯ: ‘ನೆರವು ನೀಡಿ ನನ್ನ ಕುಟುಂಬವನು್ನ ರಕ್ಷಿಸಿ’
ದಾವಣಗೆರೆ, ಜು.3: ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನನ್ನ ಪತಿ ಕರಿಬಸಪ್ಪ ಅವರ ಕಿಡ್ನಿಯನ್ನು ತುರ್ತಾಗಿ ಬದಲಾವಣೆ ಮಾಡಬೇಕಿದ್ದು, ಅದರ ಶುಲ್ಕವನ್ನು ಭರಿಸುವ ಶಕ್ತಿ ನನ್ನಲ್ಲಿಲ್ಲ. ಹಾಗಾಗಿ, ದಾನಿಗಳು ನೆರವು ನೀಡಿ ಕಷ್ಟದಲ್ಲಿರುವ ನನ್ನ ಕುಟುಂಬವನ್ನು ರಕ್ಷಿಸಿ ಎಂದು ಇಲ್ಲಿನ ತೋಳಹುಣುಸೆಯ ಕರಿಬಸಪ್ಪ ಅವರ ಪತ್ನಿ ಕವಿತಾ ಸಾರ್ವಜನಿಕರಲ್ಲಿ ಬೇಡಿಕೊಂಡಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಿ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದು, ಪ್ರತಿ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ. ಒಂದು ಬಾರಿ ಡಯಾಲಿಸಿಸ್‌ಗೆ 350 ರೂ. ಶುಲ್ಕ ಹಾಗೂ ಪ್ರಯಾಣ ವೆಚ್ಚ ಸೇರಿ ಒಟ್ಟು 500 ರೂ. ಖರ್ಚಾಗುತ್ತಿದೆ. ಇದರಿಂದ ಹಣ ಕೂಡಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಿಂಡಿಕೇಟ್ ಬ್ಯಾಂಕ್ ಮತ್ತು ಮತ್ತಿತರೆ ಬ್ಯಾಂಕ್‌ಗಳಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಚಿಕಿತ್ಸೆ ನೀಡಿಸಿದ್ದೇನೆ ಎಂದರು.
ಆದ್ದರಿಂದ ದಾನಿಗಳು ಆರ್ಥಿಕ ಸಹಾಯ ಮಾಡಿ ನನ್ನ ಪತಿಯನ್ನು ಉಳಿಸಿಕೊಡಿ ಎಂದು ಅಂಗಲಾಚಿದರು.ವೈಎಫ್‌ಐಯ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ರವಿಕುಮಾರ್ ಮಾತನಾಡಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಕರಿಬಸಪ್ಪ ಅವರಿಗೆ ಪತ್ನಿ ತನ್ನ ಮೂತ್ರಪಿಂಡವನ್ನೇ ನೀಡಲು ಸಿದ್ಧರಾಗಿದ್ದಾರೆ. ಆದರೆ, ಅದಕ್ಕಾಗಿ ತಗಲುವ ವೆಚ್ಚ ಭರಿಸದಂತಹ ಸ್ಥಿತಿಯಲ್ಲಿದ್ದಾರೆ. ಸರಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಕೆಲಸ ಮಾಡುವ ಕವಿತಾಳಿಗೆ ಮಾಸಿಕ 1,800 ರೂ. ಸಿಗುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮೂತ್ರಪಿಂಡದ ಬದಲಿ ಚಿಕಿತ್ಸೆಗೆ ಸುಮಾರು 5ರಿಂದ 6 ಲಕ್ಷ ರೂ. ಆವಶ್ಯಕತೆ ಇದೆ. ಆದ್ದರಿಂದ ಸಹಾಯ ಮಾಡಲು ಇಚ್ಛಿಸುವ ದಾನಿಗಳು ಕವಿತಮ್ಮ ಕೋಂ ಕರಿಬಸಪ್ಪ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ತುರ್ಚಘಟ್ಟ, ಉಳಿತಾಯ ಖಾತೆ ನಂಬರ್ 10526100300110 ಖಾತೆಗೆ ಹಣ ನೀಡಬಹುದು ಅಥವಾ ಮಾಹಿತಿಗಾಗಿ 8970413408 ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಲೋಕೇಶ್ ನಾಯ್ಕಿ, ರಾಜೇಶ್ ನೇರ್ಲಗಿ ಮತ್ತಿತರರಿದ್ದರು.







