ಹಸಿದ ಗಜದ ಹಿಂಡಿಗೆ ವರ್ಷದಲ್ಲಿ 13 ಬಲಿ
ಅಸಹಾಯಕತೆ ಪ್ರದರ್ಶಿಸಿದ ಕೊಡಗು ಅರಣ್ಯ ಇಲಾಖೆ, ಕಾಡಾನೆಗಳ ಮೇಲೂ ಗುಂಡಿನ ದಾಳಿ

ಮಡಿಕೇರಿ ಜು.3: ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ಮತ್ತು ನಾಗರಹೊಳೆ ರಕ್ಷಿತಾರಣ್ಯಗಳಿಂದ ಆವೃತ್ತವಾಗಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಮುಖವಾಗಿ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಮೀಣ ಭಾಗಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ದಾಳಿಗೆ ಸಿಲುಕಿ 13 ಮಂದಿ ಜೀವ ಕಳೆದು ಕೊಂಡಿದ್ದಾರೆ.
ಅರಣ್ಯ ಭಾಗದಲ್ಲಿ ಕ್ಷೀಣಿಸುತ್ತಿರುವ ಹಸಿರು ವಲಯದಿಂದ ಉಂಟಾಗಿರುವ ಆಹಾರ ಮತ್ತು ನೀರಿನ ಅಭಾವದಿಂದ ಕಾಡು ಬಿಟ್ಟು ಗ್ರಾಮೀಣ ಭಾಗಕ್ಕೆ ನುಗ್ಗುತ್ತಿರುವ ಕಾಡಾನೆಗಳಿಂದಾಗಿ ಜಿಲ್ಲೆಯ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಾನು ಬೆಳೆದ ಭತ್ತ, ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾನೆ. ನಿತ್ಯ ನಿರಂತರವಾದ ಕಾಡಾನೆಗಳ ಉಪಟಳಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜಿಲ್ಲೆಯ ವಿವಿಧೆಡೆ ಕಂದಕಗಳು, ಸೌರ ಬೇಲಿಗಳನ್ನು ನಿರ್ಮಿಸಿದೆ. ಆದರೆ, ಅವುಗಳ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವ ಕಾರಣ ಕಂದಕ, ಸೌರ ಬೇಲಿಗಳನ್ನೇ ಪುಡಿಗಟ್ಟಿ ಗ್ರಾಮೀಣ ಭಾಗಗಳತ್ತ ನುಗ್ಗುತ್ತಿರುವ ಕಾಡಾನೆಗಳು ಬೆಳೆಗಾರರ ಆತಂಕಕ್ಕೆ ಕಾರಣವಾಗಿವೆ. ಕೊಡಗಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆನ್ನುವ ಜನ ಸಾಮಾನ್ಯರ ಕೂಗು ಆಡಳಿತಾರೂಢರು ಮತ್ತು ಅಧಿಕಾರಿಗಳ ಕಿವಿಗೆ ಬಿದ್ದಿದ್ದರೂ ಪರಿಹಾರ ಮಾತ್ರ ಶೂನ್ಯ. ಫಲ ಸ್ವರೂಪ ವರ್ಷಂಪ್ರತಿ ಕಾಡಾನೆಗಳಿಗೆ ಜನರು ಬಲಿಯಾಗುವುದು ಸಾಮಾನ್ಯ ಎಂಬಂತಾಗಿದೆ. ಕಳೆದೊಂದು ದಶಕದಲ್ಲಿ ಕಾಡಾನೆಗಳಿಂದ ಆಗಿರುವ ಜೀವಹಾನಿಯತ್ತ ಗಮನ ಹರಿಸಿದರೆ, 2015-16ನೆ ಸಾಲಿನಲ್ಲಿ ಕಾಡಾನೆಗಳು 13 ಮಂದಿಯನ್ನು ಬಲಿತೆಗೆದು ಕೊಂಡು, ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಆಹಾರವಿಲ್ಲದೆ ಪರದಾಟ: ಕಾಡಾನೆಗಳ ಪ್ರಮುಖ ಆಹಾರ ಬಿದಿರಿಗೆ ಕೆಲವು ವರ್ಷಗಳ ಹಿಂದೆ ತಗುಲಿದ ಕಟ್ಟೆರೋಗದಿಂದಾಗಿ ಅರಣ್ಯ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿದ್ದ ಬಿದಿರು ಸಂಪೂರ್ಣ ಒಣಗಿ ನಾಶದಂಚಿಗೆ ತಲುಪಿದೆ. ಆಹಾರದ ಕೊರತೆ ಈ ಬೃಹತ್ ದೆೇಹಿಗಳನ್ನು ಅತೀವವಾಗಿ ಕಾಡುತ್ತಿದೆ. ಇದರೊಂದಿಗೆ ಅರಣ್ಯ ಇಲಾಖೆಯ ಗೊತ್ತು ಗುರಿ ಇಲ್ಲದ ಕಾರ್ಯಕ್ರಮಗಳಿಂದ ಅರಣ್ಯ ಭಾಗಗಳಲ್ಲಿ ಇದ್ದ ಹಳೆಯ ಕೆರೆಗಳು ಹೂಳು ತುಂಬಿ ಮುಚ್ಚಲ್ಪಟ್ಟಿವೆ. ಹೊಸ ಕೆರೆಗಳನ್ನು ನಿರ್ಮಿಸುವ ಮೂಲಕ ವನ್ಯ ಜೀವಿಗಳಿಗೆ ಅಗತ್ಯ ನೀರನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಇಲಾಖೆಯಿಂದ ನಡೆಯದಿರುವುದು ತೀವ್ರ ಕುಡಿಯುವ ನೀರಿನ ಅಭಾವವನ್ನು ಸೃಷ್ಟಿಸುವ ಜೊತೆಗೆ ಕಾಡಾನೆಗಳು ನಾಡಿಗೆ ದಾಳಿನಡೆಸಲು ಮುಖ್ಯ ಕಾರಣ ಎನ್ನಲಾಗಿದೆ. ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಆನೆ ಕಂದಕಗಳು, ಕಾಂಕ್ರಿಟ್ ಪಿಲ್ಲರ್‌ಗಳು, ಆನೆ ಗೇಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಹೀಗಿದ್ದೂ ಹಸಿದ ಹೊಟ್ಟೆ ಈ ಯಾವುದೇ ಅಡೆತಡೆಗಳನ್ನು ಮೀರಿ ಮುನ್ನುಗ್ಗುವ ಧೈರ್ಯವನ್ನು ಕಾಡಾನೆಗಳಿಗೆ ಒದಗಿಸಿಬಿಟ್ಟಿದೆ. ಕಾಫಿ ತೋಟಗಳಲ್ಲಿ ಬೆಳೆಗಾರರ ಆರೈಕೆಯಲ್ಲಿರುವ ಬಾಳೆ, ಹಲಸು, ಭತ್ತದ ಫಸಲು ಕಾಡಾನೆಗಳ ಹೊಟ್ಟೆ ತುಂಬುತ್ತಿವೆ. ಒಂದೆಡೆ ಮೂಕ ಪ್ರಾಣಿಗಳ ಸಂಕಷ್ಟ, ಮತ್ತೊಂದೆಡೆ ಸಾಲ ಸೋಲ ಮಾಡಿದ ಬೆಳೆಗಾರನ ಫಸಲು ನಾಶ.ಇವೆಲ್ಲದಕ್ಕೂ ಶಾಶ್ವತ ಪರಿಹಾರ ದೊರಕಬಹುದೇ ಎನ್ನುವ ನಿರೀಕ್ಷೆಯಲ್ಲೇ ರೈತರು ಕಾಲಕಳೆಯುವಂತಾಗಿದೆ.
ಗುಂಡಿನ ದಾಳಿಗೆ ಕಾಡಾನೆಗಳು ಬಲಿ :
ಇತ್ತೀಚೆಗೆ ಸುಳುಗೋಡು ಗ್ರಾಮದಲ್ಲಿ ಸಾವಿಗೀಡಾದ ಕಾಡಾನೆ ದೇಹದಲ್ಲಿ ಎರಡು ಮದ್ದುಗುಂಡುಗಳು ಪತ್ತೆಯಾಗಿತ್ತು. ಶವ ಪರೀಕ್ಷೆ ಸಂದರ್ಭ ಸಿಕ್ಕಿದ ಮದ್ದುಗುಂಡುಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. ಹೊಟ್ಟೆಯ ಭಾಗದಲ್ಲಿ ಹಾಗೂ ಹೃದಯದಲ್ಲಿ ಪ್ರತ್ಯೇಕವಾಗಿ ಎರಡು ಗುಂಡುಗಳು ದೊರೆತಿದ್ದವು. ತೋಟದಲ್ಲಿ ಸುಮಾರು 25 ವರ್ಷದ ಗಂಡು ಕಾಡಾನೆಯ ಕಳೇಬರ ಪತ್ತೆಯಾಗಿತ್ತು. ನಾಗರಹೊಳೆ ಅರಣ್ಯದಂಚು ಹಾಗೂ ಕಾಫಿ ತೋಟದಲ್ಲಿ ಒಟ್ಟು 3 ಆನೆಗಳು ಮೃತ ಪಟ್ಟಿರುವ ಘಟನೆ ನಡೆದಿತ್ತು.
ಸುಳುಗೋಡು ಗ್ರಾಮದ ಕಾಫಿ ತೋಟದಲ್ಲಿ 45 ವರ್ಷ ಪ್ರಾಯದ ಒಂದು ಗಂಡಾನೆ ಮೃತಪಟ್ಟಿದ್ದರೆ, ಕಾರ್ಮಾಡು ಪೈಸಾರಿ ಹಾಗೂ ತಟ್ಟೆಕೆರೆ ಹಾಡಿ ಬಳಿ 40 ರಿಂದ 45 ವರ್ಷ ಪ್ರಾಯದ 2 ಗಂಡಾನೆಗಳು ಮೃತಪಟ್ಟಿದ್ದವು. ಅಲ್ಲದೆ, ಕಾರ್ಮಾಡು ಪೈಸಾರಿಯಲ್ಲಿ ಸತ್ತಿರುವ ಆನೆಯ ದಂತಗಳನ್ನು ಕಳವು ಮಾಡಲಾಗಿತ್ತು. ದಂತ ಕಳವು ಗೈಯುವ ಸಲುವಾಗಿಯೇ ಆನೆಯನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಂಶಯವ್ಯಕ್ತ ಪಡಿಸಿತ್ತು.
ಇನ್ನು ತಟ್ಟೆಕೆರೆ ಹಾಡಿಯ ಬಳಿ ಮೃತಪಟ್ಟಿರುವ ಆನೆ ಅರಣ್ಯದಂಚಿನ ಕಂದಕಕ್ಕೆ ಬಿದ್ದು ಸಾವನ್ನಪ್ಪಿತ್ತು. ಹೀಗೆ ಜಿಲ್ಲೆಯಲ್ಲಿ ಕಾಡಾನೆಗಳು ಕೂಡ ಸಂಘರ್ಷದಲ್ಲಿ ಬಲಿಯಾಗುತ್ತಿದ್ದು, ಇದು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಕೊಡಗಿನಂತಹ ಪ್ರದೇಶಕ್ಕೆ ಉತ್ತಮ ಬೆಳವಣಿಗೆ ಅಲ್ಲ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಗೆ ಬರುವ ಸಚಿವರೆಲ್ಲರೂ ಕಾಡಾನೆ ಹಾವಳಿಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆ ಹೊರತು ಈ ವರೆಗೂ ಕಾರ್ಯರೂಪಕ್ಕೆ ತಂದಿಲ್ಲ ಎಂದು ಜನತೆ ದೂರಿದ್ದಾರೆ. ಇದರಿಂದ ಅರಣ್ಯ ಇಲಾಖೆ ಕೂಡ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದೆ.ಆಮೆಗತಿಯ ಸರಕಾರದ ನಿರ್ಧಾರಗಳಿಂದಾಗಿ ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆ ನಡುವಿನ ಸಂಘರ್ಷಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಲಿವೆ ಎನ್ನುವುದನ್ನು ಕಾದು ನೋಡಬೇಕಷ್ಟೆ.
ಕಾಡಾನೆ ದಾಳಿಗೆ ಮೃತಪಟ್ಟವರ ಸಂಖ್ಯೆ : 2007-08ನೆ ಸಾಲಿನಲ್ಲಿ 4 ಮಂದಿ.
2008-09ನೆ ಸಾಲಿನಲ್ಲಿ 6 ಮಂದಿ
2009-10ನೆ ಸಾಲಿನಲ್ಲಿ 6 ಮಂದಿ
2010-11ನೆ ಸಾಲಿನಲ್ಲಿ 8 ಮಂದಿ
2011-12ನೆ ಸಾಲಿನಲ್ಲಿ 4 ಮಂದಿ
2012-13ನೆ ಸಾಲಿನಲ್ಲಿ 8 ಮಂದಿ
2013-14ನೆ ಸಾಲಿನಲ್ಲಿ 8 ಮಂದಿ
2014-15 ನೆ ಸಾಲಿನಲ್ಲಿ 8 ಮಂದಿ







