ಶಿಕ್ಷಕರ ಪ್ರತಿಭೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ
ಕಲಾಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆಗೆ ಚಾಲನೆ
.jpg)
ಸಾಗರ , ಜು.3: ಪ್ರತಿಭೆ ಅನಾವರಣಕ್ಕೆ ಅವಕಾಶ ದೊರೆತಾಗ ಮಾತ್ರ ಕಲಾತ್ಮಕ ಗುಣ ಹೊರಗೆ ಬರುತ್ತದೆ. ಶಿಕ್ಷಕರಲ್ಲಿ ಇರುವ ಪ್ರತಿಭೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಾಹಿತಿ ಡಾ. ನಾ.ಡಿಸೋಜ ಅಭಿಪ್ರಾಯಿಸಿದ್ದಾರೆ.
ನಗರದಲ್ಲಿನ ಗುರುಭವನದಲ್ಲಿ ಶನಿವಾರ ಕಲಾಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಇತರ ವೃತ್ತಿಯಲ್ಲಿದ್ದವರಲ್ಲಿ ಪ್ರತಿಭೆ ಇದ್ದರೆ ಹೆಚ್ಚು ಉಪಯೋಗವಾಗುವುದಿಲ್ಲ. ಆದರೆ ಶಿಕ್ಷಕರಲ್ಲಿ ಪ್ರತಿಭೆ ಇದ್ದರೆ ಅದು ವಿದ್ಯಾರ್ಥಿಗಳ ಮೂಲಕ ಸಮೂಹಕ್ಕೆ ಒಳಿತು ಉಂಟು ಮಾಡುವುದು ಎಂದರು. ಶಿಕ್ಷಕರ 30 ವರ್ಷದ ಸೇವಾವಧಿಯಲ್ಲಿ ಸಾವಿರಾರು ಮಕ್ಕಳು ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಶಿಕ್ಷಕರಿಗೆ ಹೆಚ್ಚಿನ ಗೌರವ ಸಮಾಜದಿಂದಲೂ ಸಿಗುತ್ತದೆ. ಪ್ರತಿಭಾವಂತ ಶಿಕ್ಷಕರು ಸಮಾಜದ ಆಸ್ತಿಯಾಗಿರುತ್ತಾರೆ. ಶಿಕ್ಷಣ ಇಲಾಖೆ ಶಿಕ್ಷಕರಲ್ಲಿ ಇರುವ ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜ ಅವರನ್ನು ಗುರುತಿಸುವಂತಾಗಬೇಕು ಎಂದು ನುಡಿದರು.
ಶಿಕ್ಷಕರು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲಿಸುವತ್ತ ಗಮನ ಹರಿಸುವ ಅಗತ್ಯವಿದೆ. ಮಕ್ಕಳ ಸೂಕ್ಷ್ಮಸಂವೇದಿಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕು. ಇಂತಹ ವೇದಿಕೆಗಳ ಮೂಲಕ ಕಲಿತ ವಿದ್ಯೆಯನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಧಾರೆ ಎರೆದು ಅವರಲ್ಲಿ ಕಲಾಪ್ರಜ್ಞೆಯನ್ನು ಹೆಚ್ಚಿಸಬೇಕು. ತನ್ಮೂಲಕ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರಂಗಕರ್ಮಿ ದೇವೇಂದ್ರ ಬೆಳೆಯೂರು ಮಾತನಾಡಿ, ನಮ್ಮಲ್ಲಿನ ಅನೇಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಈ ತೊಡಗಿಕೊಳ್ಳುವಿಕೆ ಹಿಂದೆ ಶಿಕ್ಷಕರ ಕ್ರಿಯಾಶೀಲತೆಯನ್ನು ಕಾಣಬಹುದು. ಈಗ ಅವರೇ ಶಿಕ್ಷಕ ಸಂಘಟನೆಯನ್ನು ಸ್ಥಾಪಿಸಿಕೊಂಡಿರುವುದು ಗಮನಾರ್ಹ ಸಂಗತಿ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳಲು ಇಂತಹ ಸಾಂಸ್ಕೃತಿಕ ಸಂಘಟನೆಗಳು ಶಿಕ್ಷಕರಿಗೆ ನೆರವಾಗುವುದು ಎಂದರು.
ಕಲಾಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸತ್ಯನಾರಾಯಣ ಸಿರವಂತೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಿ. ಗಣಪತಪ್ಪ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಲೂಕು ಅಧ್ಯಕ್ಷ ಶಿವಪ್ಪ ಒ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಲಿಂಗಪ್ಪ, ಸಮನ್ವಯಾಧಿಕಾರಿ ವೈ. ಗಣೇಶ್, ಚಿದಂಬರ ರಾವ್ ಹಾಜರಿದ್ದರು.







