ಕಾಸರಗೋಡು ಶ್ವಾನದಳದ ‘ಟಿಫಿ’ ಸಾವು
ಕಾಸರಗೋಡು, ಜು.3: ಇಲ್ಲಿನ ಶ್ವಾನದಳಕ್ಕೆ ಅಭಿಮಾನ ತಂದಿದ್ದ ‘ಟಿಫಿ’ ಎಂಬ ಶ್ವಾನವು ಮೃತಪಟ್ಟಿದೆ. ರಾಷ್ಟ್ರೀಯ ಪೊಲೀಸ್ ಕ್ರೀಡಾಕೂಟ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಕೇರಳ ಪರ ಗೆದ್ದು ಪದಕಗಳನ್ನು ಗೆದ್ದುಕೊಟ್ಟಿತ್ತು. ಅಸ್ವಸ್ಥಗೊಂಡಿದ್ದ ‘ಟಿಫಿ’ ವಯನಾಡಿನ ಮೃಗಸಂರಕ್ಷಣಾ ಆಸ್ಪತ್ರೆಯಲ್ಲಿ ಮೃತಪಟ್ಟಿತು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಾರಿ ಕಂಚು ಮತ್ತು ಎರಡನೆ ಬಾರಿ ಬೆಳ್ಳಿ ಗೆಲ್ಲುವ ಮೂಲಕ ಸಾಧನೆ ಮಾಡಿತ್ತು. ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ನಿಷ್ಣಾತನಾಗಿದ್ದ ‘ಟಿಫಿ’ ಹಲವಾರು ಪ್ರಕರಣ ಬೇಧಿಸುವಲ್ಲಿ ನಿರ್ಣಾಯಕ ಸುಳಿವು ನೀಡಿತ್ತು. ಮೂರು ವರ್ಷ ಪ್ರಾಯದ ಈ ಶ್ವಾನವನ್ನು ಎರಡು ವರ್ಷಗಳ ಹಿಂದೆ ಅಂದರೆ, ‘ಜಾಕಿ’ ಎಂಬ ಶ್ವಾನ ಕೊನೆಯುಸಿರೆಳೆದ ಬಳಿಕ 2014ರಲ್ಲಿ ಕಾಸರಗೋಡಿಗೆ ತರಲಾಗಿತ್ತು. 2014ರಲ್ಲಿ ಬಾಂಬ್ ಪತ್ತೆ ಹಚ್ಚುವ ಸ್ಪರ್ಧೆಯಲ್ಲಿ ‘ಟಿಫಿ’ಗೆ ಕಂಚಿನ ಪದಕ ಲಭಿಸಿತ್ತು. 2015ರಲ್ಲಿ ಬೆಳ್ಳಿ ಪದಕ ಪಡೆದಿತ್ತು. ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಪೊಲೀಸ್ ಮೀಟ್‌ನಲ್ಲಿ ‘ಟಿಫಿ’ ಭಾಗವಹಿಸಿತ್ತು. ಐದು ತಿಂಗಳ ಮರಿ ಇದ್ದಾಗ ತಮಿಳುನಾಡಿನ ಮಧುರೆಯಿಂದ ತ್ರಿಶ್ಯೂರಿನ ತರಬೇತಿ ಕೇಂದ್ರಕ್ಕೆ ತರಲಾಗಿದ್ದ ‘ಟಿಫಿ’ಯನ್ನು ತರಬೇತಿಯ ಬಳಿಕ ಕಾಸರಗೋಡಿಗೆ ತರಲಾಗಿತ್ತು. ‘ಟಿಫಿ’ಯ ಸಾವಿನಿಂದ ಕಾಸರಗೋಡಿನ ಶ್ವಾನದಳದ ಬಲ 2ಕ್ಕೆ ಕುಸಿದಿದೆ. ‘ರೂನಿ’ ಮತ್ತು ‘ಬಡ್ಲು’ ಈಗ ಶ್ವಾನದಳದ ತಂಡದಲ್ಲಿದೆ.





