ಏಡಿ ಹಿಡಿಯಲು ಹೋದ ವ್ಯಕ್ತಿ ಮೃತ್ಯು
ಪಡುಬಿದ್ರೆ, ಜು.3: ಇಲ್ಲಿಗೆ ಸಮೀಪದ ಕಾಡಿಪಟ್ನ ಸಮುದ್ರದ ಕಿನಾರೆ ಬಳಿ ಏಡಿ ಹಿಡಿಯಲು ಹೋದ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಪಡುಬಿದ್ರೆಯ ನಡಿಪಟ್ನ ನಿವಾಸಿ ದಾಮೋದರ ಕರ್ಕೇರ (62) ಎಂದು ಗುರುತಿಸಲಾಗಿದೆ. ಜು.1ರಂದು ಸಂಜೆ 6 ಗಂಟೆಗೆ ಏಡಿ ಹಿಡಿಯಲು ಹೋಗಿದ್ದಾಗ ಇವರು ವಿಪರೀತ ಮಳೆಯಿಂದುಂಟಾದ ಸಮುದ್ರದ ಅಬ್ಬರದ ಅಲೆಗೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾದರು. ಜು.2ರಂದು ಸಂಜೆ ಇವರ ಮೃತದೇಹವು ಹೆಜಮಾಡಿ ಗ್ರಾಮದ ಅಳಿವೆಬಾಗಿಲು ಎಂಬಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





