ಅಸಮಾನತೆಯ ವಿರುದ್ಧ ಧ್ವನಿಯೆತ್ತಿದ ಕನಕದಾಸ: ರಾಮಚಂದ್ರನ್
ಸಿಎಂ ಸಿದ್ದರಾಮಯ್ಯರಿಂದ ಕನಕದಾಸರ ಕುರಿತ 23 ಪುಸ್ತಕಗಳ ಲೋಕಾರ್ಪಣೆ

ಬೆಂಗಳೂರು, ಜು. 3: ಸಮಾಜದಲ್ಲಿ ಕೇವಲ ಮೇಲ್ಜಾತಿ, ಮೇಲ್ವರ್ಗದವರು ಮಾತ್ರ ಕಾವ್ಯ ರಚನೆ ಮಾಡುವವರು ಎಂಬ ಪುರೋಹಿತ ಶಾಹಿ ಮನೋಭಾವ ತುಂಬಿ ಹೋಗಿದೆ. ಇಂತಹ ಸಂದರ್ಭದಲ್ಲಿಯೂ ಕನಕದಾಸ ಪ್ರಸ್ತುತವಾಗಿದ್ದಾರೆ ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಿಸಿದ್ದಾರೆ.
ರವಿವಾರ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಗರದ ಯವನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ 23 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.
ಕನಕದಾಸರು ಜಾತಿ ಹಾಗೂ ಶ್ರೇಣೀಕೃತ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದವರು. ಇಂದು ರಾಮಾಯಣ ರಚಿಸಿದ ವಾಲ್ಮೀಕಿಯನ್ನು ಬ್ರಾಹ್ಮಣ ಎಂದು ಬಿಂಬಿಸುತ್ತಿರುವ ಈ ಸಂದರ್ಭದಲ್ಲಿ ಕನಕದಾಸ ಪ್ರಸ್ತುತವಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮೂರು ನೂರಕ್ಕೂ ಹೆಚ್ಚು ಕೀರ್ತನೆಯನ್ನು ರಚಿಸುವುದರ ಮೂಲಕ ಕನಕದಾಸರು ಸಮಾಜ ವನ್ನು ಪರಿವರ್ತನೆಯ ಹಾದಿಗೆ ಕೊಂಡೊಯ್ದರು. ಸಮಾಜದ ಬದಲಾವಣೆಗೆ ಕನಕದಾಸರ ಕೀರ್ತನೆ ಗಳಲ್ಲಿನ ಅಂಶಗಳು, ಅವರ ತತ್ವಗಳು ಹೆಚ್ಚು ಪ್ರಸಾರ ಆಗಬೇಕು ಎಂದರು.
ಇಂದಿನ ಆಧುನಿಕ ಸಮಾಜದಲ್ಲಿ ಶ್ರೇಣೀಕೃತ ಹಾಗೂ ಜಾತಕಗಳ ಮೂಲಕ ಜಾತಿ ಲೆಕ್ಕಚಾರ ಮಾಡುತ್ತಿದ್ದಾರೆ. ‘ರಾಮಧ್ಯಾನ ಚರಿತ್ರೆ’ಯಲ್ಲಿ ಭತ್ತವನ್ನು ಶ್ರೀಮಂತರಿಗೆ ಹಾಗೂ ರಾಗಿಯನ್ನು ಬಡವರಿಗೆ ಕನಕಸಾದರು ಹೋಲಿಕೆ ಮಾಡಿದ್ದರು. ಅಲ್ಲದೆ, ಭತ್ತ-ಶ್ವೇತವರ್ಣ ಮತ್ತು ರಾಗಿ-ಕಪ್ಪು ಎಂದು ಹೇಳಲಾಗಿದೆ. ಆದರೆ, ಕನಕದಾಸರು ಅಂದು ರಾಗಿಯೇ ಶ್ರೇಷ್ಠ ಎಂದು ಕೀರ್ತನೆಗಳಲ್ಲಿ ಹಾಡಿದ್ದಾರೆ. ಆ ಮೂಲಕ ಯಾವುದೂ ಮೇಲು-ಕೀಳು ಅಲ್ಲ ಎಂಬ ಸಂದೇಶ ಸಾರಿದವರು ಕನಕ ಎಂದು ಪ್ರತಿಪಾದಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ವೌಲ್ಯ ಹಾಗೂ ವ್ಯಕ್ತಿತ್ವ ವಿಕಸನಗೊಳಿಸುವಂತಹ ಮನರಂ ಜನಾ ವಿಷಯಗಳನ್ನು ಒದಗಿಸಲು ಸರಿಯಾದ ವೇದಿಕೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಬಹುತೇಕ ಪದವಿ ಕಾಲೇಜುಗಳು ಪದವೀಧರರನ್ನು ತಯಾರಿಸುತ್ತಿವೆ ಹೊರತು, ವಿದ್ಯಾವಂತರನ್ನಲ್ಲ ಎಂದ ಅವರು, ಎಲ್ಲಿ ವಿವೇಕ ಹಾಗೂ ವೌಲ್ಯ ಇರುವುದಿಲ್ಲವೊ ಅಂತಹ ಸಮಾಜದಲ್ಲಿ ಸಾವಿರ ಪದವೀಧರರನ್ನು ಸೃಷ್ಟಿಸಿದರೂ ಪ್ರಯೋಜವಾಗುವುದಿಲ್ಲ ಎಂದು ಹೇಳಿದರು.
ಕನಕದಾಸರ ಕೀರ್ತನೆಗಳನ್ನು ಕನ್ನಡ ನಾಡಿಗೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಪಸರಿಸಬೇಕು. ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರ ಸಂಪಾದಕೀಯದಲ್ಲಿರುವ ಸಮಗ್ರ ವಚನ ಸಂಪುಟವನ್ನು 2 ಸಂಪುಟಗಳನ್ನಾಗಿಸಿ ಎಲ್ಲರಿಗೂ ಸಿಗುವ ಹಾಗೆ ಮಾಡಬೇಕು ಎಂದು ಅಭಿಪ್ರಾಯಿಸಿದರು.
ಜಾತಿ, ಧರ್ಮವನ್ನು ಮುರಿದು, ಸಮಾಜಕ್ಕೆ ಮಾನವೀಯ ವೌಲ್ಯಗಳುಳ್ಳ ಸಂದೇಶ ನೀಡಿದವರು ಕನಕದಾಸ ಎಂದ ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿಗೂ-ಜಾತಿಗೂ ಯಾವುದೇ ಸಂಬಂಧವಿಲ್ಲ. ವ್ಯಾಸ, ವಾಲ್ಮೀಕಿ ಹಾಗೂ ಕನಕ ಕೊಟ್ಟಿರುವ ಸಂದೇಶಗಳು ಇದುವರೆಗೂ ಭಾರತದಲ್ಲಿ ಯಾರೂ ನೀಡಿಲ್ಲ ಎಂದು ಹೇಳಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಸಂತ ಕವಿ ಕನಕದಾಸರನ್ನು ಕುರಿತು 23 ಪುಸ್ತಕಗಳ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮೇಲ್ಮನೆ ಸದಸ್ಯ ಎಚ್.ಎಂ.ರೇವಣ್ಣ , ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ಸಂಸ್ಕೃತ ವಿವಿ ಕುಲಪತಿ ಪದ್ಮಾ, ಕಾ.ತ.ಚಿಕ್ಕಣ್ಣ ಮೊದಲಾದವರು ಉಪಸ್ಥಿತರಿದ್ದರು.







