ತನಿಖೆಗೆ ವಿಶೇಷ ತಂಡ ರಚನೆಗೆ ಉಗ್ರಪ್ಪ ಸೂಚನೆ
ಕಳವು ಆರೋಪ ಹೊರಿಸಿ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಹಲ್ಲೆ

ಬೆಂಗಳೂರು, ಜು. 3: ಕಳವು ಆರೋಪ ಹೊರಿಸಿ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲುಸ್ತುವಾರಿಯಲ್ಲಿ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಬೇಕೆಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಾಕೀತು ಮಾಡಿದ್ದಾರೆ.
ರವಿವಾರ ಹೊಸಕೋಟೆಗೆ ಸಮಿತಿ ಸದಸ್ಯರೊಂದಿಗೆ ಭೇಟಿ ನೀಡಿ ಶಾಲೆ, ವಿದ್ಯಾರ್ಥಿಗಳ ಪೋಷಕರು ಹಾಗೂ ಪೊಲೀಸರಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ನಗರದ ಜಿಕೆಬಿಎಂಎಸ್ ಶಾಲೆಯ ವಿದ್ಯಾರ್ಥಿಗಳ ಮೇಲೆ ಕಳ್ಳತನದ ಆರೋಪ ಹೊರಿಸಿ ನೂರ್ ಹಾಗೂ ಆತನ 5 ಸ್ನೇಹಿತರು ನಡೆಸಿದ ಪೈಶಾಚಿಕ ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ವಿವರಣೆ ಕೊಡಿ: ಹಲ್ಲೆಗೊಳಗಾದ ವಿದ್ಯಾರ್ಥಿಗಳು ಓದುತಿದ್ದ ಶಾಲೆಗೆ ಭೇಟಿ ನೀಡಿದ ಸಮಿತಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲ್ ಆಂಜಿನಪ್ಪ ಹಾಗೂ ತರಗತಿಯ ಮುಖ್ಯ ಶಿಕ್ಷಕಿಯಿಂದ ಮಾಹಿತಿ ಪಡೆದರು. ವಿದ್ಯಾರ್ಥಿಗಳನ್ನು ಕೇವಲ ಪೋಷಕರು ಮಾತ್ರ ತುರ್ತು ಕಾರಣವಿದ್ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಅನುಮತಿ ಪಡೆದುಕೊಂಡು ಹೊರಗೆ ಕರೆದುಕೊಂಡು ಹೋಗಬೇಕು.
ಆದರೆ, ಅಪರಿಚಿತರು ಬಂದಾಗ ವಿದ್ಯಾರ್ಥಿಗಳನ್ನು ಅವರೊಂದಿಗೆ ಕಳುಹಿಸಿದ್ದೇ ಕೃತ್ಯಕ್ಕೆ ಕಾರಣ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಶಾಲೆಯ ಶಿಕ್ಷಕರಿಂದ ಸ್ಪಷ್ಟ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಉಗ್ರಪ್ಪ ಇದೇ ವೇಳೆ ತಿಳಿಸಿದರು.
ಸಾಯಿಸುವ ಬೆದರಿಕೆ:
ಹಲ್ಲೆಯ ಸಮಯ ದಲ್ಲಿ ನಮ್ಮನ್ನು ಸಾಯಿಸಿ ಇದೇ ಪ್ರದೇಶದಲ್ಲಿ ಹಳ್ಳತೋಡಿ ಮುಚ್ಚಿಹಾಕುವುದಾಗಿ ಬೆದರಿಕೆ ಹಾಕಿದರು’ ಎಂದು ವಿದ್ಯಾರ್ಥಿಗಳು ಸಮಿತಿಯ ಮುಂದೆ ತಮ್ಮ ಅಳಲು ತೋಡಿ ಕೊಂಡಿದ್ದಲ್ಲದೆ, ಹಲ್ಲೆಯಿಂದ ಮೈಮೇಲೆ ಮೂಡಿರುವ ಗಾಯಗಳು ಹಾಗೂ ಬಾಸುಂಡೆಗಳನ್ನು ತೋರಿಸಿದ ವಿದ್ಯಾರ್ಥಿಗಳು ನ್ಯಾಯ ದೊರಕಿಸಿಕೊಡುವಂತೆ ಕಣ್ಣೀರಿಟ್ಟರು.
ಹಲ್ಲೆ ನಡೆಸಿದವರು ಬೇರೆ ರಾಜ್ಯಗಳಿಂದ ಬಂದು ಸ್ಥಳಿಯವಾಗಿ ನೆಲೆಸಿರುವ ಕೂಲಿ ಕಾರ್ಮಿಕರನ್ನು ಆಗಾಗ್ಗೆ ಈ ಸ್ಥಳಕ್ಕೆ ಕರೆದುಕೊಂಡು ಬಂದು ಅವರಿಂದ ಹಣ ದೋಚಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕುತಿದ್ದರು. ಈ ಬಗ್ಗೆ ಅವರ ಪೋಷಕರಿಗೆ ತಿಳಿಸಿದರೂ ಪೋಷಕರು ಮಕ್ಕಳಿಗೆ ಬುದ್ಧಿ ಹೇಳುವುದಾಗಿ ಪ್ರಕರಣವನ್ನು ಅಲ್ಲಿಯೇ ಅಂತ್ಯಗೊಳಿಸುತ್ತಿದ್ದರು ಎಂದು ಸ್ಥಳಿಯರು ಸಮಿತಿಗೆ ಮಾಹಿತಿ ನೀಡಿದರು.
ಅನಂತರ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಶಾಸಕ ನಾಗರಾಜ್ ಪೋಷಕರಿಗೆ ಧೈರ್ಯ ಹೇಳಿ, ವಿದ್ಯಾಭ್ಯಾಸ ಮುಂದುವರಿಯುವಂತೆ ನೋಡಿಕೊಳ್ಳಲಾಗುವುದು. ಸರಕಾರಿ ವೆಚ್ಚದಲ್ಲಿ ವಿದ್ಯಾಭ್ಯಾಸ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಕಂಡುಬಂದಿದ್ದು ಈ ಪ್ರಕರಣದ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪೋಷಕರು ದೂರು ನೀಡಿದರೂ, ದೂರು ಸ್ವೀಕರಿಸದ ಸಬ್ ಇನ್‌ಸ್ಪೆೆಕ್ಟರ್ ದಯಾನಂದ್ ಹಾಗೂ ಮುಖ್ಯ ಪೇದೆಗಳಾದ ಜಯರಾಮ್ ಹಾಗೂ ರಾಜು ಎಂಬವರನ್ನು ಈಗಾಗಲೇ ಅಮಾನತು ಮಾಡಲಾಗಿದೆ.
ಸ್ಥಳೀಯ ಶಾಸಕ ಎಂಟಿಬಿ ನಾಗರಾಜ್, ಸಮಿತಿ ಸದಸ್ಯೆ ಮೀರಾಬಾಯಿ, ಕೆ.ಬಿ.ಶಾಣಪ್ಪ, ಮೋಟಮ್ಮ ಹಾಗೂ ಜಿಪಂ ಅಧ್ಯಕ್ಷ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







