ನೇಣು ಬಿಗಿದು ಆತ್ಮಹತ್ಯೆ
ಸುಳ್ಯ, ಜು.3: ಅಜ್ಜಾವರ ಗ್ರಾಮದ ಅತ್ಯಾಡಿ ನಿವಾಸಿ, ಸುಳ್ಯ ಜಿಪಂ ಉಪ ವಿಭಾಗದ ಉದ್ಯೋಗಿಯಾಗಿರುವ ರಾಘವ ಗೌಡರ ಪುತ್ರ ಕೌಶಿಕ್ (22) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಬೆಳಗ್ಗೆ ಮನೆಯಲ್ಲಿದ್ದ ಕೌಶಿಕ್ 10:30ರ ಸುಮಾರಿಗೆ ತನ್ನ ಕೊಠಡಿಗೆ ತೆರಳಿ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ. ಅತ್ಯಾಡಿ ರಾಘವ ಗೌಡರ ಪತ್ನಿ ಗೀತಾಕುಮಾರಿ 2 ವಾರಗಳ ಹಿಂದೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಗೀತಾ ಆತ್ಮಹತ್ಯೆ ಮಾಡಿಕೊಳ್ಳುವ ದಿನ ಬೆಳಗ್ಗೆ ಕೌಶಿಕ್‌ನ ಜತೆ ಜಗಳವಾಗಿತ್ತೆನ್ನಲಾಗಿದೆ. ಮಗ ತನಗೆ ಬೈದುದರಿಂದ ಬೇಸರಗೊಂಡಿದ್ದ ಗೀತಾ ಆತ್ಮಹತ್ಯೆಗೆ ಶರಣಾಗಿದ್ದರು. ಆ ಬಳಿಕ ರಾಘವ ಗೌಡರಿಗೂ, ಕೌಶಿಕ್‌ಗೂ ಒಂದೆರಡು ಬಾರಿ ಮನೆಯಲ್ಲಿ ಜಗಳವಾಗಿತ್ತೆನ್ನಲಾಗಿದೆ. ಅದೇ ಬೇಸರದಿಂದ ಕೌಶಿಕ್ ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಅನಂತಶಂಕರ್, ಎಸ್ಸೈ ಚಂದ್ರಶೇಖರ ಭೇಟಿ ನೀಡಿ ಶವ ಮಹಜರು ನಡೆಸಿದರು.
Next Story





