ಭದ್ರತೆ ನೀಡುವವರು ಯಾರು?
ಮಾನ್ಯರೆ,
ನಗರಗಳಲ್ಲಿ ಮಾಲ್‌ಗಳು, ಚಿತ್ರಮಂದಿರಗಳು 24 ಗಂಟೆಗಳ ಕಾಲವೂ ತೆರೆದಿರಿಸಲು ಅವಕಾಶ ನೀಡಲು ಕೇಂದ್ರ ಉದ್ಧೇಶಿಸಿದೆ. ಇದರಿಂದಾಗಿ ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತವೆ, ಉದ್ಯೋಗಗಳು ಹೆಚ್ಚುತ್ತವೆ ಎಂದೆಲ್ಲ ಸರಕಾರ ಭಾವಿಸಿದೆ. ಮಧ್ಯರಾತ್ರಿಯ ಬಳಿಕ ಓಡಾಡುವವರು, ಮಾಲ್‌ಗಳಲ್ಲಿ ತಿರುಗಾಡುವವರು ಯಾರು ಎನ್ನುವುದನ್ನು ಅಧ್ಯಯನ ಮಾಡಬೇಕಾದ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ಕೇವಲ 11 ಗಂಟೆಯವರೆಗೆ ತೆರೆದಿರುವ ಈ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ದರೋಡೆ, ಲೂಟಿಗಳು ನಡೆಯುತ್ತಿವೆ. ರಾತ್ರಿ 9 ಗಂಟೆಗೆ ಬೆಂಗಳೂರು ನಗರದಲ್ಲಿ ಯಾರೂ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯುವಂತಹ ಸನ್ನಿವೇಶ ಇಲ್ಲ. ಹೀಗಿರುವಾಗ ಮಧ್ಯ ರಾತ್ರಿಯ ಬಳಿಕವೂ ಮಾಲ್‌ಗಳು, ಚಿತ್ರಮಂದಿರಗಳು ತೆರೆದಿದ್ದರೆ, ಈ ಜನರಿಗೆ ಭದ್ರತೆಯನ್ನು ನೀಡುವವರು ಯಾರು? ಕಳ್ಳಕಾಕರಿಗೆ, ದರೋಡೆ ಮಾಡುವವರಿಗೆ ಇದರಿಂದ ಹೆಚ್ಚು ಅವಕಾಶ ಸಿಕ್ಕಿದಂತಾಗುವುದಿಲ್ಲವೇ? ಬಹುಶಃ ಚಿತ್ರಮಂದಿರ, ಮಾಲುಗಳು 24 ಗಂಟೆ ತೆರೆದ ಬಳಿಕ, ಸರಕಾರ ಬಾರ್‌ಗಳಿಗೆ, ಮದ್ಯ ಮಾರಾಟಕ್ಕೂ 24 ಗಂಟೆ ಅವಕಾಶ ಕೊಡುವ ಸಾಧ್ಯತೆಗಳಿವೆ. ಯಾಕೆಂದರೆ ಇದರಿಂದಲೂ ಅಬಕಾರಿ ಇಲಾಖೆಗೆ ಹೆಚ್ಚು ಆದಾಯ ಬರುತ್ತದೆ. ಜೊತೆಗೆ ಉದ್ಯೋಗ, ವಹಿವಾಟುಗಳೂ ಹೆಚ್ಚುತ್ತವೆ. ಆದರೆ ಇದೇ ಸಂದರ್ಭದಲ್ಲಿ ಹಗಲಲ್ಲಿ ಕಾವಲು ಕಾಯುವಂತೆ, ರಾತ್ರಿಯಲ್ಲೂ ಕಾವಲು ಕಾಯಲು ಸಾಕಷ್ಟು ಪೊಲೀಸ್ ಸಿಬ್ಬಂದಿಗಳು ರಾಜ್ಯ ಸರಕಾರದ ಬಳಿ ಇದ್ದಾರೆಯೇ? ಇಲ್ಲದೇ ಇದ್ದರೆ ಇದರ ಸಂಪೂರ್ಣ ಲಾಭವನ್ನು ದುಷ್ಕರ್ಮಿಗಳು ತಮ್ಮದಾಗಿಸಿಕೊಳ್ಳುತ್ತಾರೆ. ಆದುದರಿಂದ, 24 ಗಂಟೆಗಳ ಕಾಲ ಮಾಲ್, ಚಿತ್ರಮಂದಿರಗಳನ್ನು ತೆರೆಯುವ ಮೊದಲು ಸರಕಾರ ಯೋಚಿಸಬೇಕು. ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಬೇಕು.





