ಬಗ್ದಾದ್: ಅವಳಿ ಕಾರ್ ಬಾಂಬ್ ಸ್ಫೋಟಕ್ಕೆ 125 ಬಲಿ

ಬಗ್ದಾದ್,ಜು.3: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ರವಿವಾರ ಬೆಳಗ್ಗೆ ನಡೆದ ಎರಡು ಪ್ರತ್ಯೇಕ ಬಾಂಬ್ ದಾಳಿಗಳಲ್ಲಿ ಕನಿಷ್ಠ 125 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡಿದ್ದಾರೆ.
ನಗರದ ಕೇಂದ್ರ ಭಾಗದಲ್ಲಿರುವ ಕರಾಡಾ ಪ್ರದೇಶದಲ್ಲಿ ಮುಂಜಾನೆ ಕಾರ್ ಬಾಂಬ್ ಸ್ಫೋಟಿಸಿ 145 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪವಿತ್ರ ರಮಝಾನ್ ತಿಂಗಳಾದ್ದರಿಂದ ಬೆಳಗ್ಗಿನ ವೇಳೆಯೇ ಭಾರೀ ಸಂಖ್ಯೆಯಲ್ಲಿ ಶಾಪ್ಪಿಂಗ್‌ನಲ್ಲಿ ತೊಡಗಿದ್ದ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಈ ಬಾಂಬ್ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆಯಾದರೂ ಅದನ್ನು ಇನ್ನೂ ದೃಢಪಡಿಸಲಾಗಿಲ್ಲ. ಮೃತರಲ್ಲಿ ಅನೇಕ ಮಂದಿ ಮಕ್ಕಳೂ ಕೂಡಾ ಇದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಸ್ಫೋಟದಿಂದಾಗಿ ಸಮೀಪದ ಸೆಲ್‌ಫೋನ್ ಹಾಗೂ ಜವಳಿ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿದ್ದು, ಅದನ್ನು ನಂದಿಸಲು ಅಗ್ನಿಶಾಮಕದಳವು ಸಂಜೆಯವರೆಗೂ ಹರಸಾಹಸ ನಡೆಸಿತ್ತು. ಬಾಂಬ್ ಸ್ಫೋಟದ ಕೆಲವೇ ತಾಸುಗಳ ಬಳಿಕ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉದ್ರಿಕ್ತ ಜನರ ಗುಂಪೊಂದು ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳನ್ನು ಟಿವಿ ವಾಹಿನಿಯೊಂದು ವರದಿ ಮಾಡಿದೆ.
ಪೂರ್ವ ಬಾಗ್ದಾದ್‌ನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಸುಧಾರಿತ ಸ್ಫೋಟಕವೊಂದು ಸ್ಫೋಟಿಸಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ. ಆದರೆ ಯಾವುದೇ ಸಂಘಟನೆ ಸಹ ಈ ದಾಳಿಯ ಹೊಣೆಯನ್ನು ವಹಿಸಿಕೊಂಡಿಲ್ಲ.
ಇರಾಕ್‌ನ ಪ್ರಮುಖ ನಗರವಾದ ಫಲ್ಲೂಜಾವನ್ನು ಐಸಿಸ್ ಹಿಡಿತದಿಂದ ವಿಮೋಚನೆಗೊಳಿಸಿರುವುದಾಗಿ ಭದ್ರತಾಪಡೆಗಳು ಘೋಷಿಸಿದ ಒಂದೇ ವಾರದ ಬಳಿಕ ಬಗ್ದಾದ್‌ನಲ್ಲಿ ಈ ಅವಳಿ ಸ್ಫೋಟಗಳು ಸಂಭವಿಸಿವೆ. ಇರಾಕಿ ಸೇನೆಯು ಅನ್ಬಾರ್ ಪ್ರಾಂತದಲ್ಲಿರುವ ರಮಮಾದಿ, ಹೀತ್ ಹಾಗೂ ರುತ್ಬಾ ನಗರಗಳನ್ನು ಕೂಡಾ ಐಸಿಸ್ ನಿಯಂತ್ರಣದಿಂದ ಮುಕ್ತಗೊಳಿಸಿದೆ.







