ಚೆಂಬರಿಕ ಖಾಝಿ ನಿಗೂಢ ಮೃತ್ಯು ಪ್ರಕರಣ: ರಹಸ್ಯ ಭೇದಿಸಲು ಒತ್ತಾಯಿಸಿ ನಡೆಸುತ್ತಿದ್ದ ಮುಷ್ಕರ ಹಿಂದೆಗೆತ

ಕಾಸರಗೋಡು, ಜು.3: ಮಂಗಳೂರು, ಚೆಂಬರಿಕ ಖಾಝಿಯಾಗಿದ್ದ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರ ನಿಗೂಢ ಮರಣದ ರಹಸ್ಯವನ್ನು ಹೊರತರುವಂತೆ ಒತ್ತಾಯಿಸಿ ಎರಡು ತಿಂಗಳಿನಿಂದ ಕಾಸರಗೋಡು ಹೊಸ ಬಸ್‌ನಿಲ್ದಾಣ ಪರಿಸರದಲ್ಲಿ ಖಾಝಿಯವರ ಕುಟುಂಬಸ್ಥರು ಮತ್ತು ಕ್ರಿಯಾಸಮಿತಿ ಪದಾಧಿಕಾರಿಗಳು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ರವಿವಾರ ಹಿಂದೆಗೆದುಕೊಳ್ಳಲಾಗಿದೆ.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ನಡೆಸಿದ ಮಾತುಕತೆ ಹಿನ್ನೆಲೆಯಲ್ಲಿ ಮುಷ್ಕರ ಹಿಂದೆಗೆದುಕೊಳ್ಳಲಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಸೂಚನೆಯಂತೆ ಸಚಿವರು ರವಿವಾರ ಬೆಳಗ್ಗೆ ಕಾಸರಗೋಡು ಅತಿಥಿಗೃಹದಲ್ಲಿ ನಡೆಸಿದ ಮಾತುಕತೆ ಬಳಿಕ ಮುಷ್ಕರ ಹಿಂದೆಗೆದುಕೊಳ್ಳಲಾಯಿತು. ಖಾಝಿ ಪ್ರಕರಣದ ಕುರಿತು ಶಾಸಕ ಪಿ.ಬಿ.ಅಬ್ದುರ್ರಝಾಕ್ ಮತ್ತು ಕೆ.ಕುಂಞಿರಾಮನ್ ಹಾಗೂ ಎನ್.ಎ.ನೆಲ್ಲಿಕುನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು.
ಹೋರಾಟ ಸಮಿತಿ ಪದಾಧಿಕಾರಿಗಳಾದ ಡಾ.ಸುರೇಂದ್ರನಾಥ್, ಸಿದ್ದೀಕ್ ನದ್ವಿ ಚೇರೂರ್, ಅಬ್ದುಲ್ ಖಾದರ್ ಚಟ್ಟಂಚಾಲ್, ಇ.ಅಬ್ದುಲ್ ಕುಂಞಿ, ಎಂ.ಎ.ಹಂಝ, ಖಾಝಿಯವರ ಪುತ್ರ ಸಿ.ಎಂ.ಮುಹಮ್ಮದ್ ಶಾಫಿ, ಅಬ್ದುಲ್ ಖಾದರ್ ಸಅದಿ, ವಿ.ಎಂ.ಅಹ್ಮದ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು.





