ಚೀನಾ: ಅಧ್ಯಕ್ಷರ ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಹೆದರಿ ಹಿರಿಯ ಅಧಿಕಾರಿಗಳ ಸರಣಿ ಆತ್ಮಹತ್ಯೆ

ಬೀಜಿಂಗ್,ಜು.4: ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಾಂಗ್ ಅವರು ಭ್ರಷ್ಟಾಚಾರ ವಿರೋಧಿ ಅಭಿಯಾನದ ಎಚ್ಚರಿಕೆ ಗಂಟೆ ಮೊಳಗಿರುವುದರಿಂದ ಭ್ರಷ್ಟಾಚಾರ ಎಸಗಿದ ಹಿರಿಯ ಅಧಿಕಾರಿಗಳು ಕಾನೂನು ಕ್ರಮದ ಭೀತಿಯಿಂದ ಸರಣಿಯೋಪಾದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
2013ರಿಂದೀಚೆಗೆ ವಿವಿಧ ಸ್ತರಗಳಲ್ಲಿರುವ 150ಕ್ಕೂ ಹೆಚ್ಚು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚೀನಾ ಮಾಧ್ಯಮಗಳು ಬಹಿರಂಗಪಡಿಸಿವೆ. 2013ರಲ್ಲಿ 46 ಮಂದಿ, 2014ರಲ್ಲಿ 54 ಮಂದಿ ಹಾಗೂ 2015ರಲ್ಲಿ 30 ಮಂದಿ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತ ಸಾವಿನ ಸರಣಿ 2016ರಲ್ಲೂ ಮುಂದುವರಿದಿದ್ದು, ಕಳೆದ ಭಾನುವಾರ ವರೆಗೆ 28 ಮಂದಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಹುತೇಕ ಮಂದಿ ತಮ್ಮ ಕಚೇರಿ ಅಥವಾ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀಜಿಂಗ್ ಮೂಲದ ಹಿರಿಯ ಶಿಕ್ಷಣ ತಜ್ಞರೊಬ್ಬರು, "ದೇಶದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ" ಎಂದು ಹೇಳಿದ್ದಾರೆ. ಈ ಬಗ್ಗೆ ವಿವರ ನೀಡಲು ಅವರು ನಿರಾಕರಿಸಿದ್ದಾರೆ.
2012 ಮತ್ತು 2013ರಲ್ಲಿ ಹ್ಯೂ ಜಿಂಟಾವೊ ಅಧ್ಯಕ್ಷರಾಗಿದ್ದಾಗ 68 ಮಂದಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಮಾರ್ನಿಂಗ್ ಪೋಸ್ಟ್ ಹೇಳಿದೆ. ಜಿಂಗ್ಪಾಂಗ್ ಆಡಳಿತದ ಅವಧಿಯಲ್ಲಿ ಈ ಪ್ರಮಾಣ ಹೆಚ್ಚುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ನಿಜ. ಭ್ರಷ್ಟ ಅಧಿಕಾರಿಗಳು ಅಂತಿಮವಾಗಿ ಖಿನ್ನತೆಗೆ ಒಳಗಾಗಿ ಈ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.







