ಭಾರತದ ವಿಶ್ವ ಶ್ರೇಷ್ಠ ಹಾಕಿ ಆಟಗಾರ ಮೊಹಮ್ಮದ್ ಶಾಹಿದ್ ಗೆ ತೀವ್ರ ಅನಾರೋಗ್ಯ
ಶಾಹಿದ್ ಗಿರಲಿ ದೇಶದ ಪ್ರಾರ್ಥನೆ

ಗುರ್ಗಾಂವ್, ಜು.4 : ಭಾರತದ ವಿಶ್ವ ಶ್ರೇಷ್ಠ ಹಾಕಿ ಆಟಗಾರ ಮೊಹಮ್ಮದ್ ಶಾಹಿದ್ ಗುರ್ಗಾಂವ್ ನ ಆಸ್ಪತ್ರೆಯೊಂದರಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಅವರ ಹುಟ್ಟೂರು ವಾರಣಾಸಿಯಿಂದ ಅವರನ್ನು ಇಲ್ಲಿಗೆ ಕೇವಲ ಕೆಲವೇ ದಿನಗಳ ಹಿಂದೆ ಸ್ಥಳಾಂತರಿಸಲಾಗಿತ್ತು. ಕೇವಲ 56 ರ ಹರೆಯದ ಶಾಹಿದ್ ಭಾರತವನ್ನು 1980, 84 ಹಾಗೂ 88 ರ ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸಿದ್ದರು.
ಸುಮಾರು 8-10 ವರ್ಷಗಳ ಕಾಲ ತಮ್ಮ ವೃತ್ತಿಯ ಉತ್ತಂಗದಲ್ಲಿದ್ದಾಗ ಹಾಕಿ ಕ್ರೀಡೆಯಲ್ಲಿ ಅವರಿಗೆ ಸರಿಸಮಾನರು ಯಾರೂ ಇರಲಿಲ್ಲ. ಹಾಕಿ ಕ್ರೀಡೆಯ ಮಾಂತ್ರಿಕನೆಂದೇ ಅವರನ್ನು ವರ್ಣಿಸಲಾಗುತ್ತಿತ್ತು. ಅವರ ಆಟದ ಶೈಲಿ ಅದ್ಭುತವಾಗಿತ್ತು. ಎದುರಾಳಿ ತಂಡದ ಆಟಗಾರರನ್ನು ಹಿಮ್ಮೆಟ್ಟಿಸಲು ಅವರು ಅಸುಸರಿಸುತ್ತಿದ್ದ ತಂತ್ರಗಳು ಎಂಥವರನ್ನೂ ಮಂತ್ರಮುಗ್ಧಗೊಳಿಸಬಲ್ಲವಾಗಿತ್ತು. ಕ್ರಿಕೆಟ್ ಲೋಕಕ್ಕೆ ಬ್ರಾಡ್ಮೆನ್, ಸಚಿನ್, ಲಾರಾ, ಸೆಹವಾಗ್ ಹೇಗೆಯೋ, ಫುಟ್ಬಾಲ್ ಗೆ ಮರಡೋನಾ, ಪೀಲೆ, ಮೆಸ್ಸಿ ಹೇಗೆಯೋ ಹಾಗೆಯೇ ಶಾಹಿದ್ ಹಾಕಿ ಕ್ರೀಡೆಯ ಅದ್ಭುತ ಪ್ರತಿಭೆಯಾಗಿದ್ದರು. ಜನರು ತಮ್ಮೆಲ್ಲಾ ಕೆಲಸಗಳನ್ನು ಬದಿಗಿಟ್ಟು ರಾತ್ರಿ ಅಥವಾ ಹಗಲು, ಎಷ್ಟೇ ಹೊತ್ತಾಗಿದ್ದರೂ ಅವರು ಆಡುವ ಪಂದ್ಯಗಳನ್ನು ವೀಕ್ಷಿಸಲು ಹಾತೊರೆಯುತ್ತಿದ್ದರು.
ಅವರ ಹಾಕಿ ಆಟದ ಚಾಕಚಕ್ಯತೆ ಅದೆಷ್ಟಿತ್ತೆಂದರೆ ಅವರು ಐದು ಮಂದಿ ಅಂತಾರಾಷ್ಟ್ರೀಯ ಆಟಗಾರರನ್ನೂ ಮೈದಾನದಲ್ಲಿ ಮಣಿಸಲು ಸಮರ್ಥರಾಗಿದ್ದರೆಂದು ಭಾರತದ ಇನ್ನೊಬ್ಬ ಹಿರಿಯ ಹಾಕಿ ತಾರೆ ಮನೋಹರ್ ತೊಪ್ನೊ ಒಮ್ಮೆ ಹೇಳಿದ್ದರು. ಶಾಹಿದ್ ಅವರು ತಮ್ಮ ಜತೆ ಆಟಗಾರರಿಂದ ಬಹಳಷ್ಟು ಗೌರವ ಪಡೆಯುತ್ತಿದ್ದರು. ಬಾಲ್ ಅವರ ಬಳಿಯಿತ್ತೆಂದರೆ ಕನಿಷ್ಠ ಪೆನಾಲ್ಟಿ ಕಾರ್ನರ್ ಒಂದನ್ನಾದರೂ ನಿರೀಕ್ಷಿಸಬಹುದಾಗಿತ್ತು. ಹಲವಾರು ಬಾರಿ ಪಂದ್ಯಗಳ ನಡುವೆ ಇತರ ತಂಡಗಳ ಆಡಳಿತಗಳು ಶಾಹಿದ್ ಅವರನ್ನು ಮೈದಾನದಲ್ಲಿ ಹೇಗೆ ನಿಭಾಯಿಸಬಹುದೆನ್ನುವುದನ್ನು ಚರ್ಚಿಸುತ್ತಿದ್ದರು. ಹಾಗಿತ್ತು ಅವರ ಹಾಕಿ ಆಟದ ನೈಪುಣ್ಯತೆ.
ಅವರು ಯಾವತ್ತೂ ಪ್ರಶಸ್ತಿಗಾಗಿ ಹಾತೊರೆದವರಲ್ಲ. ತಮ್ಮ ನಿವೃತ್ತಿಯ ಜೀವನವನ್ನು ತಮ್ಮ ಹುಟ್ಟೂರಲ್ಲೇ ಕಳೆಯ ಬಯಸಿದ್ದರು. ಭಾರತೀಯ ತಂಡದ ಕೋಚ್ ನೀವಾಗಬಾರದೇಕೆ ಎಂದು ಒಮ್ಮೆ ಅವರನ್ನು ಪ್ರಶ್ನಿಸಿದ್ದಾಗ ``ಫೆಡರೇಶನ್ ಈ ಬಗ್ಗೆ ನನ್ನಲ್ಲಿ ಕೇಳಬೇಕೇ ಹೊರತು ನಾನು ಅದರ ಬಳಿ ಹೋದರೆ ನನ್ನನ್ನು ಭಿಕ್ಷುಕನಂತೆ ಅವರು ಕಾಣಬಹುದು. ನಾನು ವಾರಣಾಸಿಯಲ್ಲೇ ಖುಷಿಯಾಗಿದ್ದೇನೆ,'' ಎಂದವರು ಹೇಳಿದ್ದರು. ಅವರಂತಹ ಆಟಗಾರರು ಮತ್ತೆ ಹುಟ್ಟಿ ಬರಲಿಕ್ಕಿಲ್ಲ ಅವರು ಶೀಘ್ರ ಗುಣಮುಖರಾಗಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆಯಾಗಿದೆ.







