'ಮಸೀದಿಯೇ' ಇಲ್ಲದ ಕ್ಯೂಬಾದಲ್ಲಿ ಮುಸ್ಲಿಮರಿಗೆ ಸವಾಲಿನ ರಮಝಾನ್ ಉಪವಾಸ

ಅವರು ಅರೆಬಿಕ್ ಸ್ವಲ್ಪಮಟ್ಟಿಗೆ ಮಾತನಾಡುತ್ತಾರೆ ಮತ್ತು ನಿಜವಾದ ಮಸೀದಿಯೂ ಇಲ್ಲ. ಆದರೆ ಕ್ಯೂಬಾದ ಸಣ್ಣ ಮುಸ್ಲಿಂ ಸಮುದಾಯ ಪವಿತ್ರ ರಂಝಾನ್ ಉಪವಾಸವನ್ನು ಬಹಳ ನಂಬಿಕೆಯಿಂದ ಆಚರಿಸಿದ್ದಾರೆ.
ಹವಾನಾದ ಹಳೇ ನಗರಭಾಗದಲ್ಲಿ ವಸಾಹತುಶಾಹಿ ಶೈಲಿಯ ಕಟ್ಟಡದಲ್ಲಿ ಹಸಿರು ಮತ್ತು ಬಿಳಿ ಮಿನಾರೆಟ್ ಕಾಣಬಹುದು. ಇಲ್ಲೇ ಕ್ಯೂಬಾದ ಮುಸ್ಲಿಂ ಸಮುದಾಯ ಪ್ರಾರ್ಥನೆಗಾಗಿ ಸೇರುವುದು. ಈ ಗೋಡೆಗಳ ಒಳಗೆ ಪ್ರಾರ್ಥನಾ ಆವರಣದ ಗೋಡೆಯನ್ನು ಅರೆಬಿಕ್ ಕಾಲಿಗ್ರಫಿ ಮತ್ತು ಪ್ಯಾಲೆಸ್ತೀನಿ ಧ್ವಜದಲ್ಲಿ ಶೃಂಗರಿಸಲಾಗಿದೆ. ಕುರಾನ್ ಪ್ರತಿಯನ್ನು ಸ್ಪಾನಿಷ್ ಭಾಷೆಗೆ ಅನುವಾದಿಸಲಾಗಿದೆ. “ಸಲಾಂ ಅಲೇಕುಂ” ಎಂದು ಕ್ಸೇವಿಯರ್ ಇಲ್ಲಿಗೆ ಪ್ರವಾಸಿಗರನ್ನು ಆಹ್ವಾನಿಸುತ್ತಾರೆ. ಅವರು ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿ ಎರಡು ವರ್ಷದ ಹಿಂದೆ ಇಸ್ಲಾಂಗೆ ಪರಿವರ್ತನೆಗೊಂಡಿದ್ದಾರೆ.
"ಬೈಬಲ್ ಪಠ್ಯ ಅಪೂರ್ಣ ಎಂದು ನನಗೆ ಅನಿಸಿದ ಕಾರಣ ಇಸ್ಲಾಂಗೆ ಧರ್ಮವನ್ನು ಬದಲಾಯಿಸಿಕೊಂಡೆ” ಎಂದು ಕ್ಸೇವಿಯರ್ ತಮ್ಮ ನಿರ್ಧಾರವನ್ನು ವಿವರಿಸುತ್ತಾರೆ. ಶೇ. 70ರಷ್ಟು ಸಮುದಾಯ ಕ್ರೈಸ್ತ ಧರ್ಮ ಮತ್ತು ಆಫ್ರೋ ಕ್ಯೂಬಾದ ನಂಬಿಕೆಗಳನ್ನು ಪಾಲಿಸುವ ದೇಶದಲ್ಲಿ ಇದು ವಿಚಿತ್ರವೆನಿಸದೆ ಇರದು. ಕ್ಯೂಬಾದಲ್ಲಿ ಸುಮಾರು 10,000 ಮುಸ್ಲಿಮರಿದ್ದಾರೆ. ಅಂದರೆ ದೇಶದ ಜನಸಂಖ್ಯೆಯ ಶೇ. 0.1 ಭಾಗ. ತಜ್ಞರ ಪ್ರಕಾರ 1970-80ರ ದಶಕದಲ್ಲಿ ಬಂದ ಪಾಕಿಸ್ತಾನಿ ವಿದ್ಯಾರ್ಥಿಗಳಿಂದಾಗಿ ಕ್ಯೂಬಾಗೆ ಇಸ್ಲಾಂ ಪರಿಚಯವಾಗಿದೆ. ಪ್ರವಾಸಿಗರು ಈ ರಸ್ತೆಯಲ್ಲಿ ಆಗಾಗ್ಗೆ ಬರುತ್ತಾರೆ. ಆದರೆ ಇಲ್ಲಿ ಮಸೀದಿ ಕಂಡು ಅಚ್ಚರಿಪಡುತ್ತಾರೆ ಎನ್ನುತ್ತಾರೆ 17 ವರ್ಷದ ಹಿಂದೆ ಇಸ್ಲಾಂಗೆ ಪರಿವರ್ತನೆಯಾಗಿರುವ ಅಹ್ಮೆದ್ ಆಗ್ಯುಲೊ. ಅವರೇ ಈ ಪ್ರಾರ್ಥನಾ ಆವರಣ ನಡೆಸುತ್ತಾರೆ ಮತ್ತು ಸುಮಾರು 200 ಮಂದಿ ಇಲ್ಲಿ ಶುಕ್ರವಾರ ನಮಾಝ್ ಮಾಡುತ್ತಾರೆ.” ನಾನು ಅಧಿಕೃತ ಇಮಾಮ್ ಅಲ್ಲ. ಇಲ್ಲಿ ತರಬೇತಿ ಸಿಗುವುದಿಲ್ಲ. ಆದರೆ ನನಗೆ ಮೂಲ ವಿವರಗಳು ಗೊತ್ತು” ಎನ್ನುತ್ತಾರೆ.
ಕೆಲವು ನೂರು ಮೀಟರ್ ದೂರದಲ್ಲಿ ಮಸೀದಿಗಾಗಿ ಎರಡು ಹೆಕ್ಟೇರ್ ಭೂಮಿ ಇದೆ. ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ 2015 ಫೆಬ್ರವರಿಯಲ್ಲಿ ಇದರ ಭರವಸೆ ನೀಡಿದ್ದರು. ಆದರೆ ಕಟ್ಟಡ ಇನ್ನೂ ನಿರ್ಮಾಣವಾಗಿಲ್ಲ. 2015 ಜೂನ್‌ನಲ್ಲಿ ಕ್ಯೂಬಾ ಸರ್ಕಾರ ದೇಶದ ಮೊದಲ ಮಸೀದಿಯಾಗಿ ಪ್ರಾರ್ಥನಾ ಆವರಣಕ್ಕೆ ಅನುಮತಿ ಕೊಟ್ಟಿದೆ. ಪ್ರವೇಶ ದ್ವಾರದಲ್ಲಿ ನಾವು ಮಸೀದಿ ಎಂದು ಬರೆದಿದ್ದೇವೆ. ನಿಜವಾದ ಮಸೀದಿಯಲ್ಲಿ ಇನ್ನೂ ಹೆಚ್ಚು ಜಾಗ ಇರುತ್ತದೆ. ಮುಸ್ಲಿಮರು ಇಲ್ಲಿ ಸೇರಿ ಪ್ರಾರ್ಥಿಸುವುದೇ ಮುಖ್ಯ ಉದ್ದೇಶ ಎನ್ನುತ್ತಾರೆ ಅರಬ್ ಹೌಸ್ ನಿರ್ದೇಶಕ ರಿಗೊಬರ್ಟೊ ಮೆನೆನ್ಡಜ್. ಕ್ಯೂಬಾದ ಮುಸ್ಲಿಮರು 25 ವರ್ಷಗಳಿಂದ ಮಸೀದಿಗಾಗಿ ಕಾಯುತ್ತಿದ್ದಾರೆ. “ನಾವು ಮೊದಲಿಗೆ ನಗರದ ಅಪಾರ್ಟ್‌ಮೆಂಟಲ್ಲಿ ಸೇರುತ್ತಿದ್ದೆವು. ಕ್ಯೂಬಾದಲ್ಲಿ ಧರ್ಮವನ್ನು ಅನುಸರಿಸಲು ಸ್ವತಂತ್ರ ವಾತಾವರಣವಿದೆ” ಎನ್ನುತ್ತಾರೆ 1988ರಲ್ಲಿ ಇಸ್ಲಾಂಗೆ ಪರಿವರ್ತನೆಯಾದ ಕ್ಯೂಬಾದ ಮೊದಲ ಮುಸ್ಲಿಂ ವ್ಯಕ್ತಿ ಎನಿಸಿರುವ ಪೆಡ್ರೋ ಲಾಜೋ ಟೊರೆಸ್. ಕ್ಯೂಬಾದಲ್ಲಿ ರಂಝಾನ್ ಉಪವಾಸ ಕಷ್ಟ. ಸಾಮಾನ್ಯವಾಗಿ ಖರ್ಜೂರದಿಂದ ಉಪವಾಸ ತೊರೆಯಬೇಕು. ಆದರೆ ಕ್ಯೂಬಾದಲ್ಲಿ ಖರ್ಜೂರ ಸಿಗುವುದಿಲ್ಲ. “ಎಲ್ಲವೂ ರಫ್ತಾಗಬೇಕಿದೆ. ಸೌದಿ ರಾಯಭಾರ ನಮಗೆ ಖರ್ಜೂರ, ಪಾರಂಪರಿಕ ಉಡುಗೆ, ಹಲಾಲ್ ಮಾಂಸ ಒದಗಿಸುತ್ತದೆ” ಎನ್ನುತ್ತಾರೆ ಲಾಜೋ ಟೊರೆಸ್.
33 ವರ್ಷದ ಅಲೆನ್ ಕಾರ್ಸಿಯ ಇಸ್ಲಾಂಗೆ ಪರಿವರ್ತನೆಯಾದ ಮೇಲೆ ಬಹಳಷ್ಟು ಕಳೆದುಕೊಂಡಿದ್ದಾರೆ. ಸ್ನೇಹಿತರು ದೂರವಾದರು. ಕುಡಿತ, ಹಂದಿ ಮಾಂಸ ಬಿಟ್ಟೆ. ಪಾರ್ಟಿ ಮಾಡುವುದು, ಸಾಲ್ಸಾ ನೃತ್ಯ ತೊರೆದೆ. ಅಂದರೆ ಕ್ಯೂಬಾದ ಸಂಸ್ಕೃತಿ ತೊರೆದೆ ಎಂದೇ ಹೇಳಬಹುದು ಎನ್ನುತ್ತಾರೆ ಅಲೆನ್. ಇಲ್ಲಿ ಬಹುತೇಕರು ಪರಿವರ್ತನೆಗೊಂಡ ಮುಸ್ಲಿಂ ಸಮುದಾಯವೇ ಇದ್ದಾರೆ. ಉತ್ತಮವಾದುದನ್ನು ಆಹ್ವಾನಿಸಲು ವಯಸ್ಸು ಅಡ್ಡವಾಗುವುದಿಲ್ಲ ಎನ್ನುತ್ತಾರೆ 73 ವರ್ಷದಲ್ಲಿ ಇಸ್ಲಾಂ ಅಪ್ಪಿಕೊಂಡ ಲಿಯೊನಲ್ ಡಿಯಾಸ್ ಹೇಳುತ್ತಾರೆ. ಯಾಕೆಲಿನ್ ಡಿಯಾಜ್ ಎಂಟು ವರ್ಷ ಸ್ಪೇನಿನಲ್ಲಿದ್ದು ಇಸ್ಲಾಂಗೆ ಪರಿವರ್ತನೆಗೊಂಡಿದ್ದಾರೆ. ನಮ್ಮ ಹವ್ಯಾಸಗಳ ಕಾರಣ ನಮ್ಮನ್ನು ವಿದೇಶಿಯರು ಎಂದುಕೊಳ್ಳುತ್ತಾರೆ. ತಮ್ಮ ದೇಶದಲ್ಲಿ ಮುಸ್ಲಿಮರು ಇರುವುದನ್ನೂ ಅವರು ಕಲ್ಪಿಸಿಕೊಳ್ಳುವುದಿಲ್ಲ. ಆದರೆ ಕ್ಯೂಬಾದಲ್ಲಿ ಇಸ್ಲಾಂ ಹರಡುತ್ತಿದೆ ಎನ್ನುತ್ತಾರೆ ಯಾಕೆಲಿನ್. ಕ್ಯೂಬಾದಲ್ಲಿ ಧಾರ್ಮಿಕ ಉಡುಗೆಗಳೇ ಸಿಗುವುದಿಲ್ಲ. ನಮ್ಮ ಸಹೋದರರು ಸೌದಿ ಅರೆಬಿಯಾದಿಂದ ನಮಗೆ ಉಡುಗೆ ತರುತ್ತಾರೆ. ಆದರೆ ಅವರ ಸೇವೆಯಲ್ಲೇ ಬದುಕಲು ಸಾಧ್ಯವಿಲ್ಲ. ನಮ್ಮದೇ ಮಳಿಗೆ, ನಮ್ಮದೇ ಶೈಲಿಯಲ್ಲಿ ಬೇಕು. ಕ್ಯೂಬಾದಲ್ಲಿ ಇಸ್ಲಾಂನ್ನು ಪ್ರೋತ್ಸಾಹಿಸಬೇಕು ಎನ್ನುತ್ತಾರೆ.
1959ರಲ್ಲಿ ಕ್ಯೂಬಾ ಕ್ರಾಂತಿಯ ನಂತರ ಅಧಿಕೃತವಾಗಿ ದೇಶ ನಾಸ್ತಿಕವೆನಿಸಿತು. ಇಲ್ಲಿ ಧರ್ಮಗಳ ಆಚರಣೆ ಕಡಿಮೆ. ಆದರೆ ನಿಧಾನವಾಗಿ ಮಿತಿಗಳನ್ನು ತೆಗೆಯಲಾಗಿದೆ. ದೇಶದ ಇತಿಹಾಸ ನಿಧಾನವಾಗಿ ವಿಸ್ತಾರವಾಗುತ್ತದೆ. ಕಳೆದ ಶತಮಾನದಲ್ಲಿ ಅಮೆರಿಕ ಬಹಳ ಕರಿಯರನ್ನು ಕೊಂದಿದೆ. ಆದರೆ ಈಗ ಅಲ್ಲಿ ಕರಿಯ ಜನಾಂಗದ ಅಧ್ಯಕ್ಷರಿದ್ದಾರೆ ಎನ್ನುತ್ತಾರೆ ಇಮಾಮ್ ಅಹ್ಮದ್.







