ಭೋರ್ಗರೆವ ಕಡಲತಡಿಯಡಿ ಹಗಲಿರುಳು ನರಕಯಾತನೆಯ ಬದುಕು

ಮಂಗಳೂರು, ಜು.4: ಮಳೆಗಾಲದಲ್ಲಿ ಒಂದರ ಮೇಲೊಂದರಂತೆ ನಾ ಮುಂದು ಎಂಬಂತೆ ಪೈಪೋಟಿಯಲ್ಲಿ ಉಕ್ಕಿ ಬರುವ ಕಡಲ ಅಲೆಗಳ ಅಬ್ಬರ, ಭೋರ್ಗರೆವ ಕಡಲತಡಿ ನೋಡುಗರಿಗೆ ರುದ್ರ ಮನೋಹರ. ಆದರೆ, ಅದೇ ಕಡಲತಡಿಯಲ್ಲಿ ತಲೆ ತಲಾಂತರಗಳಿಂದ ವಾಸವಾಗಿರುವ ಕುಟುಂಬಗಳಿಗೆ ಮಾತ್ರ ಮಳೆಗಾಲದಲ್ಲಿ ಪ್ರಾಣವನ್ನೇ ಕೈಯಲ್ಲಿ ಹಿಡಿದು ಜೀವಿಸಬೇಕಾದ ನರಕಯಾತನೆಯ ಬದುಕು. ಮಳೆಗಾಲದಲ್ಲಿ ಸುಮಾರು ಮೂರು ತಿಂಗಳ ಅವಧಿಯಲ್ಲಿ ಹಗಲು ರಾತ್ರಿಯೆಲ್ಲಾ ಮೈಯೆಲ್ಲಾ ಕಣ್ಣಾಗಿ ಜೀವಿಸುವ ಪರಿಸ್ಥಿತಿ. ಈ ನಡುವೆ, ಜನಪ್ರತಿನಿಧಿಗಳು, ಅಧಿಕಾರಿಗಳ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕೇವಲ ಭರವಸೆಯಾಗಿಯೇ ಮುಂದುವರಿಯುತ್ತಿದೆ.
ಇದು ಉಳ್ಳಾಲ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ರುದ್ರ ಮನೋಹರ ದೃಶ್ಯದ ನಡುವಿನಲ್ಲೇ ತಮ್ಮ ಬದುಕಿಗೆ ನೆಲೆ ಕಂಡುಕೊಂಡಿರುವ ಕಡಲ ತಡಿಯ ನಿವಾಸಿಗಳ ಆತಂಕದ ಹೇಳಿಕೆಗಳು. ಇದು ಕೇವಲ ಸೋಮೇಶ್ವರ, ಮೊಗವೀರ ಪಟ್ಣ, ಉಚ್ಚಿಲದ ಪರಿಸ್ಥಿತಿ ಮಾತ್ರ ಅಲ್ಲ. ಪ್ರತಿ ಮಳೆಗಾಲದಲ್ಲೂ ಜಿಲ್ಲೆಯಾದ್ಯಂತ ಕಡಲ ಕಿನಾರೆಯ ಜನರು ಮಾತ್ರ ರಾತ್ರಿ ಹಗಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟೇ ಜೀವಿಸಬೇಕಾಗುತ್ತದೆ.
ಜಿಲ್ಲೆಯಲ್ಲಿ ಕಳೆದ ಸುಮಾರು ಎರಡು ವಾರಗಳಿಂದ ಎಡೆಬಿಡದೆ ಸುರಿಯುತ್ತಿದ್ದರಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಮೊಗವೀರ ಪಟ್ಣ ಸೇರಿದಂತೆ ಹಲವಾರು ಕಡಲತಡಿಯ ಪ್ರದೇಶಗಳು ಸಮುದ್ರಕೊರೆತದಿಂದ ತತ್ತರಿಸಿವೆ. ರವಿವಾರ ಸಂಜೆಯ ವೇಳೆಗೆ ಮಳೆ ಸ್ವಲ್ಪ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಸೋಮೇಶ್ವರ ಬೀಚ್‌ನಲ್ಲಿ ಭೋರ್ಗರೆಯುವ ಕಡಲ ರುದ್ರ ಮನೋಹರ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ನೂರಾರು ಮಂದಿ ದೇವಾಲಯದ ಹಿಂದುಗಡೆಯ ಬೀಚ್ ಬಳಿ ಬಂಡೆ ಕಲ್ಲುಗಳ ಮೇಲೆ ಜಮಾಯಿಸಿದ್ದರು. ಸಂಜೆ ಸುಮಾರು 5 ಗಂಟೆಯಿಂದ 7 ಗಂಟೆಯವರೆಗೆ ಮಳೆ ಇಲ್ಲದ್ದರಿಂದ, ಇಳಿ ಸಂಜೆಯಲ್ಲಿ ಮೋಡಗಳ ನಡುವೆ ಆಗಾಗ್ಗೆ ಇಣುಕಿ ನೋಡುವ ಸೂರ್ಯನ ಜತೆ ಸಮುದ್ರದಲ್ಲಿ ಉಕ್ಕಿ ಉಕ್ಕಿ ಬರುವ ಅಲೆಗಳು ಬಂಡೆಗಳಿಗೆ ಅಪ್ಪಳಿಸುವ ಸದ್ದು ಕೇಳಲು ಅದೆಷ್ಟು ಭೀಕರವೋ ನೋಡಲು ರುದ್ರ ಮನೋಹರವಾಗಿತ್ತು. ಆದರೆ ಬೀಚ್‌ನಿಂದ ಕಡಲ ಕಿನಾರೆಯ ಅಂಚಿನಲ್ಲಿ ಸಾಗಿದರೆ ರುದ್ರ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿ ಕಡಲ ಕಿನಾರೆಗೆ ಹಾಕಲಾಗಿದ್ದ ಬೃಹತ್ ಮರಳ ಚೀಲಗಳು ಒಡೆದು ಹೋಗಿರುವುದು ಕಂಡು ಬಂದಿದೆ.
ಸೋಮೇಶ್ವರ ಬೀಚ್‌ನಿಂದ ಮುಂದೆ ಸಾಗಿ ಮೊಗವೀರ ಪಟ್ಣದ ಬಳಿ ಮೂರು ವರ್ಷಗಳ ಹಿಂದೆ ಸಮುದ್ರ ಕೊರೆತದಿಂದ ಭಾಗಶ: ಹಾನಿಗೊಳಗಾದ ಮನೆಯೊಂದು ಇಂದು ಕೂಡಾ ಮೂಕಸಾಕ್ಷಿಯಾಗಿ ಸಮುದ್ರ ಕೊರೆತದ ಭೀಕರತೆ, ಕಡಲ ಕಿನಾರೆಯ ಜನರ ಆತಂಕದ ಬದುಕನ್ನು ಪ್ರತಿಬಿಂಬಿಸುತ್ತಿದೆ. ‘‘ನಾನು ಸಣ್ಣಂದಿನಿಂದಲೇ ನನ್ನ ಹೆತ್ತವರ ಜೊತೆ ಇಲ್ಲಿ ವಾಸಿಸುತ್ತಿದ್ದೇನೆ. ಕಡಲ ತಾಯಿಯನ್ನೇ ನಂಬಿ ನಮ್ಮ ಕುಟುಂಬ ಬದುಕಿತ್ತು. ಇದೀಗ ನಾನು ಕೂಡಾ ನನ್ನ ಜೀವನದ ತುತ್ತಿಗಾಗಿ ಅದನ್ನೇ ಅವಲಂಬಿಸಿದ್ದೇನೆ. ಸುಮಾರು 10 ವರ್ಷಗಳ ಹಿಂದೆ 500 ಮೀಟರ್‌ಗಳಷ್ಟು ದೂರದಲ್ಲಿದ್ದ ಸಮುದ್ರ ಇದೀಗ ನಮ್ಮ ಮನೆಯಿಂದ 50 ಅಡಿ ದೂರದಲ್ಲಿದೆ. ಇಂದು ಮಧ್ಯಾಹ್ನ ಕಡಲ ನೀರು ಮನೆಯ ಹಿಂಬದಿ ಹಾಕಿರುವ ಕಲ್ಲುಗಳನ್ನು ದಾಟಿ ಮನೆಯೊಳಗೆ ಪ್ರವೇಶಿಸಿತ್ತು’’ ಎಂದು ರವಿವಾರ ಸಂಜೆ ಮೊಗವೀರ ಪಟ್ಣಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ನಿವಾಸಿ, 58ರ ಹರೆಯದ ಲಕ್ಷ್ಮಿ ಎಂಬವರ ಆತಂಕದ ನುಡಿ.
‘‘ನಮಗೆ ಈ ಆತಂಕದ ಜೀವನ ಅಭ್ಯಾಸವಾಗಿ ಬಿಟ್ಟಿದೆ. ನಾವು ಹುಟ್ಟಿದ್ದೇ ಇಲ್ಲಿ. ಇಲ್ಲಿಯೇ ನಮ್ಮ ಬದುಕು. ತಾತ್ಕಾಲಿಕವಾಗಿ ಒಂದೆರಡು ತಿಂಗಳು ಬೇರೆ ಕಡೆ ಜೀವಿಸಲು ಮನಸ್ಸು ಆಗುತ್ತಿಲ್ಲ. ರಾತ್ರಿ ಹೊತ್ತು ಕಡಲಿನ ಭೋರ್ಗರೆವ ಸದ್ದು ಭೀಕರವಾಗಿರುತ್ತದೆ. ಸಮೀಪದ ಒಂದು ಮನೆಯವರು ಈಗಾಗಲೇ ಖಾಲಿ ಮಾಡಿ ಗುಳೇ ಹೋಗಿದ್ದಾರೆ’’ ಎನ್ನುತ್ತಾರೆ ಲಕ್ಷ್ಮಿಯವರು.
ಕಡಲ್ಕೊರೆತದ ಸಂದರ್ಭ ಪ್ರತಿ ಬಾರಿಯೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಒಂದಷ್ಟು ದಬಾಯಿಸಿ ಶಾಶ್ವತ ಪರಿಹಾರದ ಭರವಸೆ ನೀಡಿ ಹೊರಟು ಹೋಗುತ್ತಾರೆ. ಮತ್ತೆ ಪರಿಸ್ಥಿತಿ ಬಿಗಡಾಯಿಸಿದಾಗ ಅಥವಾ ಮುಂದಿನ ವರ್ಷವೇ ಅವರ ಭೇಟಿ. ಇಂತಹ ಭೇಟಿಯ ಬದಲು ಮಳೆಗಾಲಕ್ಕೆ ಮುಂಚಿತವಾಗಿಯೇ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರದ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕ್ರಮ ಕೈಗೊಂಡರೆ ನಮ್ಮ ಆತಂಕದ ಬದುಕಿಗೆ ನೆಮ್ಮದಿ ಸಿಗಬಹುದು ಎಂಬುದು ಕಡಲತಡಿಯ ನಿವಾಸಿಗಳ ಒತ್ತಾಯ.
‘‘ಎರಡು ವರ್ಷದ ಹಿಂದೆ ನಮ್ಮ ಮನೆ ಸಮೀಪದ ಮನೆಯೊಂದು ಸಂಪೂರ್ಣ ಹಾನಿಗೊಳಗಾಗಿತ್ತು. ಬಳಿಕ ಇಲ್ಲಿ ಕಲ್ಲುಗಳನ್ನು, ಮರಳ ಚೀಲಗಳನ್ನು ಹಾಕುವ ಕಾರ್ಯ ನಡೆದಿದೆ. ಕಳೆದ ವರ್ಷ ಆಳೆತ್ತರಕ್ಕೆ ಹಾಕಲಾಗಿದ್ದ ಕಲ್ಲುಗಳು, ಮರಳ ಚೀಲಗಳು ಈಗ ಸಂಪೂರ್ಣ ನೆಲ ಮಟ್ಟಕ್ಕೆ ಕುಸಿದಿದೆ. ಸಮುದ್ರ ಕೊರೆತದ ಭೀಕರತೆ ಎಷ್ಟಿದೆ ಎಂದರೆ, ವಿದೇಶಿ ತಂತ್ರಜ್ಞಾನದಲ್ಲಿ ಹಾಕಲಾದ ಬೃಹತ್ತಾದ ಮರಳ ಚೀಲ ಒಡೆದು ಅದರ ಹೊರಭಾಗ ಕಲ್ಲುಗಳನ್ನು ದಾಟಿ ನಮ್ಮ ಮನೆಯ ಹಿಂಬದಿಗೆ ಬಂದು ಸೇರಿದೆ. ಆ ಮರಳ ಚೀಲ ದಪ್ಪ, ಅದರ ಭಾರ ನೋಡಿದರೆ, ಈ ತೆರನಾದ ತೆರೆಗಳಿಂದ ಈ ಮರಳ ಚೀಲಗಳು ಅದೆಷ್ಟು ರಕ್ಷಣೆ ನೀಡಬಲ್ಲವು ಎಂಬುದನ್ನು ಅರಿಯಬಹುದು. ’’ ಎಂದು ತಮ್ಮ ಮನೆಯ ಹಿಂಭಾಗದಲ್ಲಿ ಬಂದು ಬಿದ್ದಿರುವ ಒಡೆದು ಹೋದ ಮರಳ ಚೀಲವನ್ನು ತೋರಿಸುತ್ತಾರೆ ವೃತ್ತಿಯಲ್ಲಿ ಮೀನುಗಾರರಾಗಿರುವ ಜಯಾನಂದ ಪಟ್ಲ (ಚಾನು).
ಮಳೆಗಾಲದಲ್ಲಿ ಸಮುದ್ರ ಬದಿಯಲ್ಲಿರಲಿ ಅಗ್ನಿಶಾಮಕ ತಂಡ: ಆಗ್ರಹ
ಸಮುದ್ರ ಕೊರತೆದ ತೀವ್ರತೆ ಸೋಮವಾರ ಮತ್ತೆ ಉಲ್ಬಣಿಸಿದ್ದು, ಉಳ್ಳಾಲದ ಮುಕ್ಕಚ್ಚೇರಿ ಬಳಿಯ ಖಿಲರಿಯ ನಗರದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಅಗ್ನಿಶಾಮಕದ ದಳದ ತಂಡ ತುರ್ತು ಕಾರ್ಯಾಚರಣೆಯಲ್ಲಿ ಸ್ಥಳೀಯರ ಜತೆ ಕೈಜೋಡಿಸಿದೆ. ‘‘ಖಿಲರಿಯ ನಗರದಲ್ಲಿಯೂ ಇಂದು ಕಡಲ್ಕೊರೆತದಿಂದಾಗಿ ಸುಮಾರು 60ರಷ್ಟು ಮನೆಗಳಿಗೆ ನೀರು ನುಗ್ಗಿದೆ. ಅಗ್ನಿಶಾಮಕದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಡಲ್ಕೊರೆತದ ಸಮಸ್ಯೆಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಅಗ್ನಿಶಾಮಕ ದಳದ ತುಕಡಿಯೊಂದನ್ನು ತುರ್ತು ಸೇವೆಗೆ ಮೀಸಲಿಡಬೇಕು. ಇದು ಸಮುದ್ರ ಬದಿಯ ನಿವಾಸಿಗಳ ಆಗ್ರಹ. ಇಲ್ಲವಾದಲ್ಲಿ ದುರ್ಘಟನೆ ಸಂಭವಿಸಿದ ವೇಳೆ ಮಂಗಳೂರಿನಿಂದ ಅಗ್ನಿಶಾಮಕ ಸಿಬ್ಬಂದಿಆಗಮಿಸುವ ವೇಳೆ ಸಾಕಷ್ಟು ಅನಾಹುತ ಸಂಭವಿಸಿರುತ್ತದೆ’’ ಎಂದು ಸ್ಥಳೀಯರಾದ ಮುಹಮ್ಮದ್ ಮುಕ್ಕಚ್ಚೇರಿ ಹೇಳಿದ್ದಾರೆ.







