ಭಾರತ ಚೀನಾಕ್ಕೆ ಅಪಖ್ಯಾತಿ ತರಬಾರದು : ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ ಸಂಪಾದಕೀಯ

ಬೀಜಿಂಗ್, ಜು. 4: ಭಾರತದ ಎನ್‌ಎಸ್‌ಜಿ ಸದಸ್ಯತ್ವವನ್ನು ತಡೆಹಿಡಿದಿರುವುದಕ್ಕಾಗಿ ಚೀನಾ ವ್ಯಾಪಕವಾಗಿ ದೂಷಣೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಲ್ಲಿನ ಸರಕಾರಿ ಮಾಧ್ಯಮ ಭಾರತದ ವಿರುದ್ಧದ ಟೀಕಾಪ್ರಹಾರವನ್ನು ಮುಂದುವರಿಸಿದೆ. ಎನ್‌ಎಸ್‌ಜಿಗೆ ಸೇರ್ಪಡೆ ವಿಷಯದಲ್ಲಿ ಚೀನಾದ ನಿಲುವಿಗೆ ಭಾರತ ತಪ್ಪು ವಿವರಣೆ ನೀಡಬಾರದು ಹಾಗೂ ಚೀನಾಕ್ಕೆ ಅಪಖ್ಯಾತಿ ತರಬಾರದು ಎಂದು ಅದು ಹೇಳಿದೆ.
‘‘ಚೀನಾದ ನಿಲುವಿಗೆ ತಪ್ಪು ವ್ಯಾಖ್ಯಾನ ನೀಡಿ ಅದಕ್ಕೆ ಅಪಖ್ಯಾತಿ ತರುವ ಬದಲು, ಅಂತಾರಾಷ್ಟ್ರೀಯ ನಂಬಿಕೆಯನ್ನು ಗಳಿಸುವ ನಿಟ್ಟಿನಲ್ಲಿ ಭಾರತ ಪ್ರಯತ್ನಗಳನ್ನು ನಡೆಸಿದ್ದರೆ ಒಳ್ಳೆಯದಿತ್ತು’’ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಇಂದಿನ ಸಂಪಾದಕೀಯದಲ್ಲಿ ಹೇಳಿದೆ.
ಭಾರತೀಯ ಜನತೆ ಮತ್ತು ಭಾರತೀಯ ಮಾಧ್ಯಮಗಳೆರಡೂ ತಪ್ಪಿತಸ್ಥರು ಎಂದು ಸಂಪಾದಕೀಯ ಹೇಳಿದೆ. ಕಳೆದ ವಾರ ಇನ್ನೊಂದು ಸಂಪಾದಕೀಯದಲ್ಲೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು.
ಅದಕ್ಕಿಂತಲೂ ಮೊದಲು, ಸಿಯೋಲ್‌ನಲ್ಲಿ ನಡೆದ ಎನ್‌ಎಸ್‌ಜಿ ಪೂರ್ಣಾಧಿವೇಶನಕ್ಕೆ ಪೂರ್ವಭಾವಿಯಾಗಿ, ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವವನ್ನು ನೀಡುವುದನ್ನು ಚೀನಾ ಯಾಕೆ ವಿರೋಧಿಸುತ್ತದೆ ಎಂಬ ಬಗ್ಗೆ ‘ಗ್ಲೋಬಲ್ ಟೈಮ್ಸ್’ ಪುಟಗಟ್ಟಳೆ ಬರೆದಿತ್ತು. ಭಾರತ ಎನ್‌ಎಸ್‌ಜಿಗಾಗಿ ಹಾತೊರೆಯುತ್ತಿದೆ ಎಂಬ ಅಭ್ಪಿಪ್ರಾಯವನ್ನು ಅದು ಈಗಲೂ ಹೊಂದಿದೆ.
‘‘ಸಿಯೋಲ್ ಪೂರ್ಣಾಧಿವೇಶನದಲ್ಲಿ ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ನ ಸದಸ್ಯತ್ವ ಕೈತಪ್ಪಿರುವುದನ್ನು ಅರಗಿಸಿಕೊಳ್ಳಲು ಭಾರತೀಯರಿಗೆ ಸಾಧ್ಯವಾಗುತ್ತಿಲ್ಲ ಅನಿಸುತ್ತಿದೆ. ಹೆಚ್ಚಿನ ಭಾರತೀಯ ಮಾಧ್ಯಮಗಳು ಇದರ ಹೊಣೆಯನ್ನು ಚೀನಾದ ಮೇಲೆ ಹೊರಿಸಿವೆ ಹಾಗೂ ಚೀನಾದ ವಿರೋಧಕ್ಕೆ ಅದರ ಭಾರತ ವಿರೋಧಿ ಮತ್ತು ಪಾಕಿಸ್ತಾನ ಪರ ಧೋರಣೆ ಕಾರಣ ಎಂದು ಆರೋಪಿಸುತ್ತಿವೆ’’ ಎಂದು ಪತ್ರಿಕೆಯ ಸಂಪಾದಕೀಯ ಹೇಳಿದೆ.
ಕಳೆದ ವಾರ ಇದೇ ಪತ್ರಿಕೆಯು ಇಂಥದೇ ಸಂಪಾದಕೀಯವೊಂದನ್ನು ಪ್ರಕಟಿಸಿತ್ತು. ‘‘ಹೇಗೆ ವರ್ತಿಸಬೇಕು ಎನ್ನುವುದನ್ನು ಭಾರತೀಯ ರಾಷ್ಟ್ರೀಯವಾದಿಗಳು ಕಲಿಯಬೇಕು. ತಮ್ಮದು ಪ್ರಬಲ ದೇಶವಾಗಬೇಕು ಎಂಬುದಾಗಿ ಭಾರತೀಯರು ಬಯಸುತ್ತಾರೆ. ಆದರೆ, ಪ್ರಬಲ ದೇಶಗಳು ತಮ್ಮ ಆಟವನ್ನು ಹೇಗೆ ಆಡುತ್ತವೆ ಎಂಬುದನ್ನು ಅವರು ತಿಳಿಯಬೇಕು’’ ಎಂದು ಹಿಂದಿನ ಸಂಪಾದಕೀಯದಲ್ಲಿ ಪತ್ರಿಕೆ ಹೇಳಿತ್ತು. ಅದೂ ಅಲ್ಲದೆ, ಭಾರತೀಯರು ಸ್ವಾರ್ಥಿಗಳು ಮತ್ತು ತಮ್ಮದೇ ಸರಿಯೆಂದು ಹೇಳುವವರು ಎಂದಿತ್ತು.







