ಕಳವು ಪ್ರಕರಣದ ಆರೋಪಿ ಸೆರೆ

ಮಂಗಳೂರು, ಜು.5: ನಗರದ ಮಂಕಿಸ್ಟಾಂಡ್‌ನ ರಾಮಕೃಷ್ಣ ಆಶ್ರಮದ ಮುಂಭಾಗದಲ್ಲಿರುವ ಸುಬ್ರಹ್ಮಣ್ಯ ಅಟೊ ಇಂಜಿನಿಯರಿಂಗ್ ವರ್ಕ್ಸ್ ಎಂಬ ಗ್ಯಾರೇಜ್ನಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಹಮ್ಮದ್ ಬಿಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೂ.16 ರಂದು ರಾತ್ರಿ ಗ್ಯಾರೇಜ್ನ ಮುಂಭಾಗದ ಬಾಗಿಲನ್ನು ಮುರಿದು ಕೋಣೆಯ ಒಳಗೆ ಇದ್ದ ವಾಹನದ ನಾಲ್ಕು ಬ್ಯಾಟರಿಗಳು ಹಾಗೂ 19 ಸಾವಿರ ರೂ. ನಗದು ಹಣ ಹಾಗೂ ಸಿಂಡಿಕೇಟ್ ಬ್ಯಾಂಕ್ ಮತ್ತು ಭಾರತ್ ಬ್ಯಾಂಕ್‌ಗೆ ಸಂಬಂಧಪಟ್ಟ ಚೆಕ್‌ಗಳನ್ನು ಆರೋಪಿ ಕಳವುಗೈದಿದ್ದ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯಿಂದ ಸುಮಾರು 42 ಸಾವಿರ ರೂ. ಮೌಲ್ಯದ 4 ಬ್ಯಾಟರಿ, 15 ಸಾವಿರ ರೂ. ನಗದು ಹಾಗೂ ಆರೋಪಿ ಕಳವು ಮಾಡಲು ಉಪಯೋಗಿಸಿದ ಸ್ಕೂಟರ್ ಸೇರಿದಂತೆ ಒಟ್ಟು 1.17 ಲಕ್ಷ ರೂ. ವೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಶಾಂತರಾಮ್‌ಗೆ ಆರೋಪಿಯ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಕ್ಷಿಣ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕ ಅನಂತ ಮುರ್ಡೇಶ್ವರ ಆರೋಪಿಯನ್ನು ಬಂಧಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಪಿಎಸೈ ಅನಂತ ಮುರ್ಡೇಶ್ವರ, ಪಿಎಸೈ ಮುಹಮ್ಮದ್ ಶರೀಫ್, ಸಿಬ್ಬಂದಿಯಾದ ವಿಶ್ವನಾಥ, ಶೇಖರ ಗಟ್ಟಿ, ಗಂಗಾಧರ, ಧನಂಜಯಗೌಡ, ಸತ್ಯನಾರಾಯಣ, ನೂತನ್ ಕುಮಾರ್, ಪುರುಷೋತ್ತಮ, ಚಂದ್ರಶೇಖರ್ ಸಹಕರಿಸಿದ್ದಾರೆ.







