ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಂದ ‘ಸಿಂಪಲ್ಲಾಗ್ ಒಂದು ಥ್ಯಾಂಕ್ಸ್’ ಕಾರ್ಯಕ್ರಮ

ಮಂಗಳೂರು, ಜು.4: ನಗರದ ಹ್ಯಾಟ್‌ಹಿಲ್‌ನಲ್ಲಿರುವ ಬ್ಯಾರೀಸ್ ಪಬ್ಲಿಕ್ ಶಾಲೆ ಮತ್ತು ಹಿಸ್‌ಗ್ರೇಸ್ ಮಾಂಟೆಸ್ಸರಿಯ ವಿದ್ಯಾರ್ಥಿಗಳು ಪ್ರೇ ಕ್ಲಬ್ ( ಪೆಯ್ನ್ ರಿಲೀಫ್ ಆ್ಯಂಡ್ ಯು ಕ್ಲಬ್) ನ ಸಹಯೋಗದೊಂದಿಗೆ ಈದ್ ಹಬ್ಬದ ಪ್ರಯುಕ್ತ ಬಿಜೈ ಕಾಪಿಕಾಡ್‌ನಲ್ಲಿರುವ ಚಿಣ್ಣರ ಧಾಮಕ್ಕೆ ಬಟ್ಟೆ ಬರೆ, ಸಿಹಿತಿಂಡಿ, ಆಟಿಕೆಗಳನ್ನು ನೀಡುವ ಮೂಲಕ ಈದ್ ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ರಜನೀಶ್ ಕಾಪಿಕಾಡ್, ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಸಲಾಹುದ್ದೀನ್, ಬ್ಯಾರೀಸ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ರೇಗೊ, ಮಾಂಟೆಸ್ಸರಿ ವಿಭಾಗದ ಮುಖ್ಯಸ್ಥೆ ಸಲ್ಮಾ ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಬಳಿಕ ಪ್ರೇ ಕ್ಲಬ್ ಹಾಗೂ ಹಿಸ್‌ಗ್ರೇಸ್ ಮಾಂಟೆಸ್ಸರಿಯ ವಿದ್ಯಾರ್ಥಿಗಳು ಮಂಗಳೂರು ಮಹಾನಗರ ಪಾಲಿಕೆ, ಉರ್ವ ಪೊಲೀಸ್ ಠಾಣೆ, ‘ವಾರ್ತಾಭಾರತಿ’ ಕಚೇರಿ, ದಾಯ್ಜಿವರ್ಲ್ಡ್ ಕಚೇರಿ, ವಿ4 ನ್ಯೂಸ್ ಚಾನೆಲ್, ಕಾರ್ಪೊರೇಷನ್ ಬ್ಯಾಂಕ್, ಲೇಡಿಹಿಲ್ ಆಟೊರಿಕ್ಷಾ ಪಾರ್ಕ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮತ್ತಿತರ ಕಡೆಗಳಿಗೆ ಭೇಟಿ ನೀಡಿ, ಸಿಹಿ ತಿಂಡಿ ಹಂಚಿ ಸಂಸ್ಥೆಗಳು ಸಮಾಜಕ್ಕೆ ನೀಡುತ್ತಿರುವ ಸೇವೆ, ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.
ಬಳಿಕ ಕಾಟಿಪಳ್ಳ ಕೃಷ್ಣಾಪುರ ಪರಿಸರದ ಮೂರು ಬಡಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.







