ಮಾತೃಭಾಷೆ, ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿ: ಡಾ.ರಶ್ಮಿ ನಾಯಕ್

ಮಣಿಪಾಲ, ಜು.4: ಕುಟುಂಬದ ಆರೋಗ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ವಹಿಸಿಕೊಳ್ಳುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾಗಿದೆ. ಸಮಾಜ, ಮಾತೃಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ತುಂಬಿದಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ದಂತವೈದ್ಯೆ ಡಾ. ರಶ್ಮಿ ನಾಯಕ್ ಹೇಳಿದ್ದಾರೆ.
ಮಣಿಪಾಲ ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆಯ ವತಿಯಿಂದ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ರವಿವಾರ ಮಟ್ಟಿ ಬೈಲು ದಿ.ರಾಮಚಂದ್ರ ನಾಯಕ್‌ರ ಸ್ಮರಣಾರ್ಥ ಆಯೋಜಿಸಲಾದ ಬಡರೋಗಿಗಳಿಗೆ ಸಹಾಯಧನ ಮತ್ತು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ವೇದಿಕೆಯ 13ನೆ ವರ್ಷದ ಮಹಾಅಧಿವೇಶನದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಬಹುಭಾಷಾ ಕವಯಿತ್ರಿ ಕುಸುಮಾ ಕಾಮತ್, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 5ನೇ ರ್ಯಾಂಕ್ ವಿಜೇತ ಪ್ರತಿಭಾನ್ವಿತೆ ಪೂಜಾ ನಾಯಕ್, ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಿಂಚನಾ ಸಾಲ್ವಣ್‌ಕಾರ್, ಅಂತಾರಾಷ್ಟ್ರೀಯ ಕರಾಟೆಯಲ್ಲಿ ಚಿನ್ನದ ಪದಕ ವಿಜೇತೆ ಶ್ಯಾಮಿಲಿ ನಾಯಕ್‌ರನ್ನು ಸನ್ಮಾನಿಸಲಾಯಿತು. ಮುಖ್ಯಅತಿಥಿಗಳಾಗಿ ಮಟ್ಟಿಬೈಲು ರತ್ನಾವತಿ ಆರ್.ನಾಯಕ್, ಮೋಹಿನಿ ಎನ್.ನಾಯಕ್ ಮಸ್ಕತ್, ನರಸಿಂಹ ಆರ್. ನಾಯಕ್ ಬಡರೋಗಿಗಳಿಗೆ ಸಹಾಯಧನ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.
ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮಿತ್ರಾ ಎಚ್.ನಾಯಕ್ ವಹಿಸಿದ್ದರು. ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಸುನೀತಾ ನಾಯಕ್, ಉಪಾಧ್ಯಕ್ಷೆ ರೂಪಾ ನಾಯಕ್, ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಉಪೇಂದ್ರ ನಾಯಕ್, ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ವಸಂತ ನಾಯಕ್ ಮುಂಬಯಿ, ರಮೇಶ್ ಸಾಲ್ವಣ್‌ಕಾರ್. ಪಾಂಡುರಂಗ ಕಾಮತ್ ಎಳ್ಳಾರೆ, ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ಗಣೇಶ್ ನಾಯಕ್, ಮಾನಸಾ ಎಸ್.ನಾಯಕ್, ಪುರುಷೋತ್ತಮ ನಾಯಕ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಭಾರತಿ ನಾಯಕ್ ವರದಿ ವಾಚಿಸಿದರು. ಕೋಶಾಧಿಕಾರಿ ಗೀತಾ ಎಸ್.ನಾಯಕ್ ಆಯವ್ಯಯ ಮಂಡಿಸಿದರು. ರೂಪಾ ನಾಯಕ್ ಸ್ವಾಗತಿಸಿದರು. ರವಿಜಾ ನಾಯಕ್ ವಂದಿಸಿದರು. ಸುಮಿತ್ರಾ ಆರ್.ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಕಾಮತ್, ಕುಸುಮಾ ಕಾಮತ್‌ರ ವರಿಂದ ಮನರಂಜನಾ ಕಾರ್ಯಕ್ರಮ ಜರಗಿತು.







