ಸ್ನೇಹಿತರಿಗಾಗಿ ಪ್ರಾಣ ತ್ಯಾಗ ಮಾಡಿದ ಯುವಕ
ಢಾಕಾ ಭಯೋತ್ಪಾದಕ ದಾಳಿಯ ನಡುವೆ ಅನಾವರಣಗೊಂಡ ಮಾನವೀಯ ಸಂದೇಶ

ಢಾಕಾ, ಜು. 4: ಢಾಕಾದ ಹೋಲಿ ಆರ್ಟಿಸಾನ್ ಬೇಕರಿಯ ಮೇಲೆ ಜುಲೈ 1ರಂದು ಭಯೋತ್ಪಾದಕರು ನಡೆಸಿದ ದಾಳಿಯ ವೇಳೆ, ತನಗೆ ಬದುಕುವ ಅವಕಾಶವಿದ್ದರೂ, ತನ್ನಿಬ್ಬರು ಸ್ನೇಹಿತರ ಜೊತೆಗೆ ಪ್ರಾಣ ಬಿಟ್ಟ ಬಾಂಗ್ಲಾದೇಶದ 20 ವರ್ಷದ ಯುವಕ ಫರಾಝ್ ಅಯಾಝ್ ಹುಸೈನ್‌ರನ್ನು ಪತ್ರಿಕೆಯೊಂದು ತನ್ನ ಸಂಪಾದಕೀಯದಲ್ಲಿ ಕೊಂಡಾಡಿದೆ.
ತನ್ನ ಶೌರ್ಯ ಮತ್ತು ತ್ಯಾಗದ ಮೂಲಕ ಮುಂದಿನ ಹಲವು ತಲೆಮಾರುಗಳ ಬಾಂಗ್ಲಾದೇಶೀಯರಿಗೆ ಹೇಗೆ ಬದುಕಬೇಕು ಎಂಬ ಬಗ್ಗೆ ಈ ಯುವಕ ಪ್ರೇರಣೆ ನೀಡಿದ್ದಾರೆ ಎಂಬುದಾಗಿ ‘ಢಾಕಾ ಟ್ರಿಬ್ಯೂನ್’ನ ಸಂಪಾದಕೀಯ ಹೇಳಿದೆ.
ಉದಾತ್ತತೆ ಮತ್ತು ಶ್ರೇಷ್ಠತೆ ಈ ಜಗತ್ತಿನಲ್ಲಿ ಇನ್ನೂ ನೆಲೆಸಿದೆ ಹಾಗೂ ನಮ್ಮನ್ನು ಬೆರಳೆಣಿಕೆಯ ತಪ್ಪುದಾರಿಗೆಳೆಯಲ್ಪಟ್ಟ ಹಾಗೂ ಹಂತಕ ಯುವಕರ ಕೃತ್ಯಗಳಿಂದ ನಿರೂಪಿಸಬಾರದು ಎಂಬುದನ್ನು ಈ ಯುವಕ ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಪತ್ರಿಕೆ ಬಣ್ಣಿಸಿದೆ.
ಮಾನವತೆಯ ಅತ್ಯಂತ ಕೆಟ್ಟ ಮುಖವನ್ನು ಪ್ರತನಿಧಿಸುವ ಹಂತಕರಿಗೆ ಈ ದೇಶ ಜನ್ಮ ಕೊಟ್ಟಿದೆಯೇ ಎಂಬ ಬಗ್ಗೆ ದೇಶವು ವಿಸ್ಮಯಪಡುತ್ತಿರುವಾಗ, ಫರಾಝ್‌ರಂಥ ಯುವಕರಿಗೂ ಬಾಂಗ್ಲಾದೇಶ ಜನ್ಮ ನೀಡಿದೆ ಎಂಬ ಸಂಗತಿಯಿಂದ ನಾವು ಸಮಾಧಾನ ತಂದುಕೊಳ್ಳಬಹುದು ಎಂದಿದೆ.
ನಿನ್ನ ಜೀವವನ್ನು ಉಳಿಸಿಕೊಳ್ಳಬಹುದು, ನೀನು ಇಲ್ಲಿಂದ ಹೋಗಬಹುದು ಎಂಬುದಾಗಿ ಭಯೋತ್ಪಾದಕರು ಫರಾಝ್‌ಗೆ ಸೂಚಿಸಿದರು. ಆದರೆ, ಅವರ ಇಬ್ಬರು ಸ್ನೇಹಿತರಾದ ಅಬಿಂತಾ ಕಬೀರ್ ಮತ್ತು ತಾರಿಶಿ ಜೈನ್‌ರನ್ನು ಹೋಗಲು ಭಯೋತ್ಪಾದಕರು ಬಿಡಲಿಲ್ಲ. ಆಗ, ತನ್ನ ಜೀವವನ್ನು ಉಳಿಸುವ ಯೋಚನೆಯನ್ನು ಕೈಬಿಟ್ಟು ತನ್ನ ಸ್ನೇಹಿತರೊಂದಿಗೇ ಇದ್ದು, ಅವರಿಗೆ ಏನು ಸಂಭವಿಸುತ್ತದೋ ಅದನ್ನೇ ಅನುಭವಿಸಲು ಫರಾಝ್ ನಿರ್ಧರಿಸಿದರು.
ಮರು ದಿನ ಆ ಮೂವರು ಸ್ನೇಹಿತರ ಮೃತದೇಹಗಳು ಪತ್ತೆಯಾದವು. ಫರಾಝ್ ಓರ್ವ ಹೀರೋ ಆಗಿ ಈ ಲೋಕದಿಂದ ನಿರ್ಗಮಸಿದರು ಎಂದು ಸಂಪಾದಕೀಯ ಬಣ್ಣಿಸಿದೆ.
ಐಎಸ್‌ಐ ಪಿತೂರಿ: ಬಾಂಗ್ಲಾ ಆರೋಪ
ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್‌ಐ ದಾಳಿ ಸಂಘಟಿಸಿದೆ ಎಂದು ಪ್ರಧಾನಿ ಶೇಖ್ ಹಸೀನಾರ ರಾಜಕೀಯ ಸಲಹಾಕಾರ ಹುಸೈನ್ ತೌಫೀಕ್ ಇಮಾಮ್ ಆರೋಪಿಸಿದ್ದಾರೆ.
‘‘ಪಾಕಿಸ್ತಾನದ ಐಎಸ್‌ಐ ಮತ್ತು ಜಮಾತ್ ನಡುವಿನ ನಂಟು ಎಲ್ಲರಿಗೂ ಗೊತ್ತಿರುವಂಥಾದ್ದೆ. ಈಗಿನ ಸರಕಾರವನ್ನು ಅಸ್ಥಿರಗೊಳಿಸಲು ಅವರು ಬಯಸುತ್ತಿದ್ದಾರೆ’’ ಎಂದು ಇಮಾಮ್ ಟಿವಿ ಚಾನೆಲೊಂದಕ್ಕೆ ತಿಳಿಸಿದರು.
‘‘ಜಮಾತ್ ಮತ್ತು ಸ್ಥಳೀಯ ಭಯೋತ್ಪಾದಕ ಗುಂಪುಗಳು ಮಾಡುವಂತೆ ಎಲ್ಲ ಬಲಿಪಶುಗಳನ್ನು ಕಡಿದು ಕೊಲ್ಲಲಾಗಿದೆ’’ ಎಂದರು.







