ಮದೀನಾ ಆತ್ಮಹತ್ಯಾ ದಾಳಿಗೆ ನಾಲ್ವರು ಪೊಲೀಸರು ಬಲಿ; ಯಾತ್ರಿಕರು ಸುರಕ್ಷಿತ

ಮದೀನಾ/ಜಿದ್ದಾ: ಮುಸ್ಲಿಮರ ಪವಿತ್ರ ಯಾತ್ರಾಸ್ಥಳವಾದ ಮದೀನಾದ ಪವಿತ್ರ ಮಸೀದಿಯ ಹೊರಗೆ ಆತ್ಮಹತ್ಯಾ ದಾಳಿಕೋರರು ದಾಳಿ ನಡೆಸಿ ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ ಘಟನೆಯ ಬಳಿಕ ಈ ಯಾತ್ರಾಕ್ಷೇತ್ರ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ಯಾತ್ರಿಕರೂ ಸುರಕ್ಷಿತವಾಗಿದ್ದಾರೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
ಜಿದ್ದಾ ಹಾಗೂ ಖತೀಫ್ ನ ಮಸೀದಿಗಳ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂಬ ವರದಿಗಳ ಬಳಿಕ ಈ ದಾಳಿ ನಡೆದಿದೆ. ಆತ್ಮಹತ್ಯಾ ದಾಳಿಯಲ್ಲಿ ನಾಲ್ವರು ಪೊಲೀಸರು ಬಲಿಯಾಗಿದ್ದರೆ, ಐದು ಮಂದಿ ಗಾಯಗೊಂಡಿದ್ದಾರೆ. ಪ್ರವಾದಿ ಮಸೀದಿಯ ಹೊರಗೆ ಪೊಲೀಸ್ ಠಾಣೆಯ ಪಕ್ಕದಲ್ಲೇ ಆತ್ಮಹತ್ಯಾ ದಾಳಿ ನಡೆದಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿದೆ.
ಪ್ರತಿ ವರ್ಷ ಲಕ್ಷಾಂತರ ಮಂದಿ ಭೇಟಿ ನೀಡುವ ಮಸೀದಿ ಹಾಗೂ ಸಿಟಿ ಕೋರ್ಟ್ ನ ನಡುವಿನ ವಾಹನ ನಿಲುಗಡೆ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಪವಿತ್ರ ಮಸೀದಿಯತ್ತ ಶಂಕಿತರು ಮುನ್ನುಗ್ಗುತ್ತಿದ್ದಾಗ ಅದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅದನ್ನು ತಡೆದರು. ಇದರಿಂದ ದಾಳಿಕೋರರ ಆಕ್ರೋಶ ಭದ್ರತಾ ಸಿಬ್ಬಂದಿಯತ್ತ ತಿರುಗಿತು ಎಂದು ಹೇಳಲಾಗಿದೆ.
ಉರಿಯುತ್ತಿರುವ ಕಾರಿನ ಪಕ್ಕದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸತ್ತು ಬಿದ್ದಿರುವ ಹಾಗೂ ಮತ್ತಿಬ್ಬರು ನರಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಳಿಕೋರ ಕೂಡಾ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಖತೀಫ್ ನಲ್ಲಿ ಕೂಡಾ ಇಬ್ಬರು ಆತ್ಮಹತ್ಯಾ ದಾಳಿಕೋರರು ಫರಾಜ್ ಅಲ್ ಒಮ್ರನ್ ಮಸೀದಿ ಹೊರಗೆ ದಾಳಿ ನಡೆಸಿದರು.. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅರಬ್ ನ್ಯೂಸ್ ಸ್ಪಷ್ಟಪಡಿಸಿದೆ.





