ಝಾಕಿರ್ ನಾಯ್ಕ್ ಭಯೋತ್ಪಾದನೆ ವಿರೋಧಿ, ಢಾಕಾ ದಾಳಿಗೂ ಅವರಿಗೂ ಸಂಬಂಧ ಕಲ್ಪಿಸುವುದು ಹಾಸ್ಯಾಸ್ಪದ : ಐಆರ್ ಎಫ್ ಸ್ಪಷ್ಟನೆ

ಢಾಕಾ,ಜು.5: ರಾಜಧಾನಿಯ ರಾಜತಾಂತ್ರಿಕ ವಲಯದ ಹೋಟೆಲ್ ಒಂದರ ಮೇಲೆ ದಾಳಿ ಮಾಡಿ 20 ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಐವರು ಬಾಂಗ್ಲಾದೇಶಿ ಭಯೋತ್ಪಾದಕರ ಪೈಕಿ ಇಬ್ಬರು, ಭಾರತದ ಅಂತಾರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಸೇರಿದಂತೆ ಇಸ್ಲಾಮಿ ಪ್ರತಿಪಾದಕರನ್ನು ಅನುಸರಿಸುತ್ತಿದ್ದಾರೆ ಎಂದು ಕೆಲವು ಮಾದ್ಯಮಗಳು ವರದಿ ಮಾಡಿದೆ .
ಅವಾಮಿ ಲೀಗ್‌ನ ನಾಯಕರೊಬ್ಬರ ಪುತ್ರನಾದ ಉಗ್ರ ರೋಹನ್ ಇಮ್ತಿಯಾಜ್, ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಪೀಸ್ ಟಿವಿಯ ಝಾಕಿರ್ ನಾಯ್ಕ್ ಅವರ "ಎಲ್ಲ ಮುಸ್ಲಿಮರು ಉಗ್ರರಾಗಬೇಕು" ಎಂದು ಹೇಳಿದ್ದಾಗಿ ಪೋಸ್ಟ್ ಮಾಡಿದ್ದಾನೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಮುಂಬೈ ಮೂಲದ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್‌ನ ಸಂಸ್ಥಾಪಕ ಹಾಗೂ ಜನಪ್ರಿಯ ವಾಗ್ಮಿ ಝಾಕಿರ್ ನಾಯ್ಕ್ ಪೀಸ್ ಟಿವಿ ಪ್ರವಚನಗಳ ಮೂಲಕ ಬಾಂಗ್ಲಾದಲ್ಲೂ ಜನಪ್ರಿಯರು.
ಈ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್‌ನ ಆಡಳಿತ ಮುಖ್ಯಸ್ಥ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಮನ್ಸೂರ್ ಶೇಖ್ ಅವರು, "ದಾಳಿಕೋರರು ನಮ್ಮ ಬೆಂಬಲಿಗರು ಎನ್ನುವುದೇ ನನಗೆ ಹೊಸ ಸುದ್ದಿ. ಈ ಬಗ್ಗೆ ನಾನು ಎಲ್ಲೂ ಓದಿಲ್ಲ. ಝಾಕಿರ್ ನಾಯ್ಕ್ ಗೆ ಜಗತ್ತಿನ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಯಾರೋ ತಪ್ಪು ಮಾಡಿದರೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ" ಎಂದು ಪ್ರಶ್ನಿಸಿದರು. ಯಾರೋ ಒಬ್ಬ ಬೆಂಬಲಿಗ ತಪ್ಪು ಮಾಡಿದರೆ ಅದಕ್ಕೆ ಮತ್ತೊಬ್ಬರನ್ನು ಗುರಿ ಮಾಡುವುದು ಹಾಸ್ಯಾಸ್ಪದ. ಝಾಕಿರ್ ನಾಯ್ಕ್ ಅವರ ಭಾಷಣಗಳನ್ನು ಗಮನಿಸಿದರೆ ಅವರು ಉಗ್ರವಾದವನ್ನು ಸ್ಪಷ್ಟವಾಗಿ ವಿರೋಧಿಸುವವರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.ಅವರು ಪ್ರತಿ ವರ್ಷದಂತೆ ಕುಟುಂಬ ಸಮೇತ ಉಮ್ರಾ ಯಾತ್ರೆಗೆ ತೆರಳಿದ್ದು ಜುಲೈ ಎರಡನೇ ವಾರದಲ್ಲಿ ಮರಳಲಿದ್ದಾರೆ ಎಂದು ಹೇಳಿದ್ದಾರೆ.







