50ನೆ ಜಯ ಸಾಧಿಸಿದ ಆ್ಯಂಡಿ ಮರ್ರೆ
ವಿಂಬಲ್ಡನ್ ಟೆನಿಸ್ ಟೂರ್ನಿ

ಲಂಡನ್, ಜು.5: ದ್ವಿತೀಯ ಶ್ರೇಯಾಂಕಿತ,ಲೋಕಲ್ ಹೀರೋ ಆ್ಯಂಡಿ ಮರ್ರೆ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ 50ನೆ ಜಯ ಸಾಧಿಸಿದ್ದಾರೆ.
ಸೋಮವಾರ ರಾತ್ರಿ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 2013ರ ವಿಂಬಲ್ಡನ್ ಚಾಂಪಿಯನ್ ಮರ್ರೆ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು 7-5, 6-1, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ವಿಂಬಲ್ಡನ್ ಟೂರ್ನಿಯಲ್ಲಿ ಸತತ 9ನೆ ಬಾರಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಬ್ರಿಟನ್ ಆಟಗಾರ ಮರ್ರೆ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ 12ನೆ ಶ್ರೇಯಾಂಕದ ಜೋ-ವಿಲ್ಫ್ರೆಡ್ ಸೋಂಗರನ್ನು ಎದುರಿಸಲಿದ್ದಾರೆ. 12ನೆ ಶ್ರೇಯಾಂಕದ ಸೋಂಗ 2011 ಹಾಗೂ 2012ರಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು.
ಸೋಂಗ ಕೇವಲ 24 ನಿಮಿಷಗಳಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಸೋಂಗ ಎದುರಾಳಿ ಅವರದೇ ದೇಶದ ರಿಚರ್ಡ್ ಗಾಸ್ಕಟ್ ಬೆನ್ನುನೋವಿನಿಂದಾಗಿ ನಾಲ್ಕನೆ ಸುತ್ತಿನ ಪಂದ್ಯದಿಂದ ಹಿಂದೆ ಸರಿದ ಕಾರಣ ಸೋಂಗ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ಬೆರ್ಡಿಕ್ ಕ್ವಾರ್ಟರ್‌ಫೈನಲ್‌ಗೆ
ಲಂಡನ್, ಜು.5: ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ತಮ್ಮದೇ ದೇಶದ ಜಿರಿ ವೆಸ್ಲೆ ಅವರನ್ನು 5 ಸೆಟ್‌ಗಳ ಅಂತರದಿಂದ ಮಣಿಸುವುದರೊಂದಿಗೆ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರು.
ಇಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬೆರ್ಡಿಕ್ ಅವರು ವೆಸ್ಲೆ ವಿರುದ್ಧ 4-6, 6-3, 7-6(8), 6-7(9), 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. 2010ರ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಬೆರ್ಡಿಕ್ ಅಂತಿಮ 8ರ ಘಟ್ಟದಲ್ಲಿ ಫ್ರಾನ್ಸ್‌ನ ಲೂಕಾಸ್ ಪೌಲ್ಲಿ ಅವರನ್ನು ಎದುರಿಸಲಿದ್ದಾರೆ.







