ಈದ್ ಘೋಷಣೆ ಎಂದೇ ಜನ ಭಾವಿಸಿದೆವು, ಆದ್ದರಿಂದ ಇನ್ನೊಂದು ಅನಾಹುತ ತಪ್ಪಿತು
ಸೋಮವಾರ ಮಸ್ಜಿದುನ್ನಬವಿಯಲ್ಲಿದ್ದ ಮಂಗಳೂರಿನ ಉಮರ್ ಫಾರೂಕ್ ಅನುಭವ

ಮಂಗಳೂರು, ಜು.5: ಮಂಗಳೂರಿನಿಂದ ಉಮ್ರಾ ಯಾತ್ರೆಗಾಗಿ ತೆರಳಿದ್ದ ಉದ್ಯಮಿ ಉಮರ್ ಫಾರೂಕ್ ಪುತ್ತಿಗೆ ಸೋಮವಾರ ಮದೀನಾದಲ್ಲಿದ್ದರು. ಮಸ್ಜಿದುನ್ನಬವಿಯ ಪಕ್ಕದಲ್ಲೇ ಸೋಮವಾರ ಸಂಜೆ ನಡೆದ ಸ್ಪೋಟದ ಕುರಿತು ಅವರು ಕಂಡದ್ದು ಅವರ ಮಾತುಗಳಲ್ಲಿ ಇಲ್ಲಿದೆ.
"ನಾವು ಮಂಗಳೂರಿನಿಂದ ಬಂದ ಇನ್ನೊಂದು ಕುಟುಂಬದ ಜೊತೆ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ (ಸಂಜೆ ಗಂಟೆ 7.15) ಮುಗಿಸಿ ಮಸೀದಿಯ ಪಕ್ಕದಲ್ಲೇ ಇರುವ 'ಜನ್ನತ್ತುಲ್ ಬಖೀ' ದಫನ ಭೂಮಿಯ ಸಮೀಪ ಇದ್ದೆವು. ಆಗ ಇದ್ದಕ್ಕಿದ್ದಂತೆ (7.25ರ ಸುಮಾರಿಗೆ) ಸ್ಪೋಟದ ಶಬ್ಧ ಕೇಳಿಸಿತ್ತು. ಊರಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಒಮ್ಮೊಮ್ಮೆ ಸ್ಪೋಟವಾದಾಗ ಕೇಳಿದಂತಹ ಶಬ್ಧ ಅದು. ಈದ್ ಚಂದ್ರದರ್ಶನದ ನಿರೀಕ್ಷೆಯಲ್ಲಿದ್ದ ಎಲ್ಲರೂ ಇದು ಈದ್ ಘೋಷಣೆಯ ಸಂಭ್ರಮಕ್ಕೆ ನಡೆಸಿದ ಸಿಡಿಮದ್ದುಗಳ ಸದ್ದು ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ನಾವೂ ಅದೇ ರೀತಿ ಭಾವಿಸಿದೆವು. ಇದರಿಂದ ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಭಾರೀ ಸಂಖ್ಯೆಯಲ್ಲಿದ್ದ ಮಸೀದಿಯ ಜನರು ಕಕ್ಕಾಬಿಕ್ಕಿಯಾಗಿ ಒಡಿ ಇನ್ನೊಂದು ದುರಂತ ಸಂಭವಿಸುವ ಅಪಾಯ ಅಲ್ಲಿತು. ಆದರೆ ಮತ್ತೆ ಬೆಂಕಿ ಮತ್ತು ಹೊಗೆ ನಮಗಿಂತ ಸುಮಾರು 300ಮೀಟರ್ ದೂರದಲ್ಲಿ ಕಾಣಿಸಿತು. ನಿಧಾನವಾಗಿ ಅದು ಆತ್ಮಹತ್ಯಾ ದಾಳಿ ಎಂದು ಗೊತ್ತಾಯಿತು. ಈ ನಡುವೆ ಅದು ಸಿಲಿಂಡರ್ ಸ್ಪೋಟ ಎಂದೂ ಹೇಳಲಾಯಿತು. ಆದರೆ ಸೌದಿಯ ಅಧಿಕೃತ ಮಾಧ್ಯಮಗಳು ಅದನ್ನು ಆತ್ಮಹತ್ಯಾ ದಾಳಿ ಎಂದು ಹೇಳಿವೆ. ನಾನು ಕಂಡಂತೆ ಮಸೀದಿಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಹಾಗೂ ಉಮ್ರಾ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಬಳಿಕ ಇಶಾ, ತರಾವೀಹ್ ಸಹಿತ ಎಲ್ಲ ಪ್ರಾರ್ಥನೆಗಳು ಸಮಯಕ್ಕೆ ಸರಿಯಾಗಿ ನಡೆದಿವೆ.





