ಕೋಮು ಶಕ್ತಿಗಳಿಗೆ ಮಾದರಿಯಾದ ಕೋಟಿ ಪೂಜಾರಿ ಕೋಮು ಸೌಹಾರ್ದತೆಯ ಇಫ್ತಾರ್

ವಿಟ್ಲ, ಜು.5: ಸಮಾಜದಲ್ಲಿ ಕೋಮು ಭಾವನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕದ ಸನ್ನಿವೇಶದಲ್ಲೂ ಕೋಮು ಸೌಹಾರ್ದತೆಯನ್ನು ಪ್ರೇರೇಪಿಸುವ ಮನಸ್ಸುಗಳೂ ಆಗೊಮ್ಮೆ ಈಗೊಮ್ಮೆ ನಮ್ಮ ಕಣ್ಣಮುಂದೆ ಬರುತ್ತಲೇ ಇರುತ್ತವೆ.
ಇಂತಹ ಒಂದು ಅಪರೂಪದ ಘಟನೆಗೆ ತಾಲೂಕಿನ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಮಸೀದಿಯಲ್ಲಿ ನಡೆದ ಇಫ್ತಾರ್ ಕೂಟವೊಂದು ಸಾಕ್ಷಿಯಾಯಿತು. ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯಲ್ಲಿ ಪವಿತ್ರ ರಂಝಾನ್ ತಿಂಗಳಲ್ಲಿ ನಡೆಯುತ್ತಿರುವ ಇಫ್ತಾರ್ ಕೂಟಕ್ಕೆ ಭೇಟಿ ನೀಡಿದ ಸಜಿಪಮೂಡ ಗ್ರಾಮದ ಕೊಳಕೆ ನಿವಾಸಿ ಕೋಟಿ ಪೂಜಾರಿ ಎಂಬವರು ಮಸೀದಿಯ ಇಫ್ತಾರ್ ಗೆ ಬೇಕಾಗುವ ಲಘು ಪಾನೀಯ ಹಾಗೂ ಲಘು ಉಪಾಹಾರಕ್ಕೆ ಬೇಕಾಗುವ ಆಹಾರಗಳನ್ನು ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಜಾತಿ-ಮತ-ಧರ್ಮಗಳ ಆಧಾರದಲ್ಲಿ ಮನುಷ್ಯ ಮನಸ್ಸುಗಳನ್ನು ವಿಭಜಿಸಿ ನೋಡುತ್ತಿರುವ ಈ ಸಂದರ್ಭದಲ್ಲಿ ಕೋಟಿ ಪೂಜಾರಿ ಅವರ ಸೌಹಾರ್ದತೆ ನಾಗರಿಕ ಸಮಾಜದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಪೂಜಾರಿ ಅವರ ಮತ ಸೌಹಾರ್ದತೆಯನ್ನು ಬಂಟ್ವಾಳ ಪುರಸಭಾ ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ ಸಿದ್ದೀಕ್ ಗುಡ್ಡೆಅಂಗಡಿ ಹಾಗೂ ಮಸೀದಿ ಪದಾಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.





